ಚಿಕ್ಕಬಳ್ಳಾಪುರ: ಪೇಸಿಎಂ ಪೋಸ್ಟರ್ ಅಭಿಯಾನದ ವಿರುದ್ದ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಇಂತಹ ಬೆದರಿಕೆಗಳಿಗೆಲ್ಲ ನಾವು ಬೆದರಿತೀವಾ ?.ಕಾನೂನುಗಳು ನಮಗೂ ಗೊತ್ತಿದೆ. ನಾನು ಲಾ ಓದಿದ್ದೀನಿ. ಅವರು ಲಾ ಓದಿಲ್ಲಾ,ಇಂಜಿನಿಯರಿಂಗ್ ಓದಿರೋದು. ಅವರು ಕಾನೂನು ಕ್ರಮ ತಗೊಂಡ್ರೆ ನಾವ್ ಸುಮ್ನೆ ಇರ್ತೀವಾ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಜಿಲ್ಲೆಯ ಗೌರಿಬಿದನೂರಿನ ಸಮಾನತ ಸೌಧದಲ್ಲಿ ಪ್ರೊ ಗಂಗಾಧರ ಮೂರ್ತಿ ಅವರ ನುಡಿನಮನ ಕಾರ್ಯಕ್ರಮದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ಕಮಿಷನ್ ಹೇಳಿಕೆ ಕೊಟ್ಟ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣನ ವಿರುದ್ಧ ಕ್ರಮ ಕೈಗೊಂಡರೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಬಯಲಿಗೆ ಬರುತ್ತದೆ. ಅದಕ್ಕಾಗಿ ಅವರನ್ನು ಬಂಧಿಸಲು ಮುಂದಾಗುತ್ತಿಲ್ಲ ಎಂದು ಟೀಕಿಸಿದರು.
ಇನ್ನೂ ಕಮೀಷನ್ ಅಂತ ಕೆಂಪಣ್ಣ ಹೇಳ್ತಾರಲ್ಲ. ಕೆಂಪಣ್ಣನ ಮೇಲೆ ಕ್ರಮ ತೆಗೆದುಕೊಳ್ಳಿ. ಅವರ ಮೇಲೆ ಯಾಕೆ 1 ವರ್ಷ ಕಳೆದರೂ ಕ್ರಮ ಕೈಗೊಂಡಿಲ್ಲ. ಯಾಕೆಂದರೆ ಇವರ ಬಣ್ಣ ಬಯಲಾಗುತ್ತದೆ ಎಂದು ಕ್ರಮ ಕೈಗೊಂಡಿಲ್ಲ. ಬಿಜೆಪಿ ಸರ್ಕಾರದವರು ತಪ್ಪಿತಸ್ಥರರು. ಈ ಸರ್ಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ನಡೆಯುತ್ತಿದೆ ಅದಕ್ಕೆ ಅವರು ಪಲಾಯನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.