ಚಿಕ್ಕಮಗಳೂರು :ಕಸ್ತೂರಿರಂಗನ್ ವರದಿ ಅನುಷ್ಠಾನಕ್ಕೆ ಕೇಂದ್ರ ಸರಕಾರ 4ನೇ ಬಾರಿ ಅಧಿಸೂಚನೆ ಹೊರಡಿಸಿರುವ ಕ್ರಮ ವಿರೋಧಿಸಿ ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆ ಬಂದ್ ಮಾಡಲು ನಿರ್ಣಯಿಸಲಾಗಿದೆ. ಕಾಫಿ ಬೆಳೆಗಾರರ ಸಂಘಗಳು ಹಾಗೂ ದಲಿತ, ಪ್ರಗತಿಪರ, ರೈತ ಸಂಘಟನೆಗಳ ಮುಖಂಡರು ಚಿಕ್ಕಮಗಳೂರಿನಲ್ಲಿ ಇಂದು ಸಭೆ ನಡೆಸಿ ನಿರ್ಣಯ ಕೈಗೊಂಡರು.
ನಿರ್ಣಯದಂತೆ ರಾಜ್ಯ ಸರಕಾರ ಕೇಂದ್ರ ಹಸಿರು ಪೀಠಕ್ಕೆ ಸಮರ್ಪಕವಾದ ಅಫಿಡವಿಟ್ ಸಲ್ಲಿಸದ ಪರಿಣಾಮ ಸರ್ಕಾರ ಕಸ್ತೂರಿರಂಗನ್ ವರದಿ ಜಾರಿ ಮುಂದಾಗಿದೆ. ಇದರ ಕುರಿತು ಆಕ್ಷೇಪಣೆಗೆ ಎರಡು ತಿಂಗಳು ನೀಡಿರುವುದರಿಂದ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಲು ಸಭೆ ನಿರ್ಣಯ ಕೈಗೊಂಡಿದೆ. ಅಲ್ಲದೇ ಈ ವರದಿ ಜಾರಿಯಾದಲ್ಲಿ ಮೂರು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ರೈತರು, ಕಾಫಿ, ಅಡಕೆ ಬೆಳೆಗಾರರು ಸೇರಿದಂತೆ ಕಾರ್ಮಿಕರು, ವರ್ತಕರ ಬದುಕು ನಾಶವಾಗಲಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ವಿವಿಧ ಸಂಘಟನೆಗಳ ಮುಖಂಡರು ಆತಂಕ ವ್ಯಕ್ತಪಡಿಸಿದರು.
ಪಶ್ಚಿಮ ಘಟ್ಟ ವ್ಯಾಪ್ತಿಯ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸಂಬಂಧಿಸಿದಂತೆ 4ನೇ ಬಾರಿ ಅಧಿ ಸೂಚನೆ ಹೊರಡಿಸಲಾಗಿದೆ. ಜನರಿಗೆ ಮಾರಕವಾಗಿರುವ ಈ ವರದಿಯನ್ನು ವಿರೋಧಿಸಿ ಅನೇಕ ಬಾರಿ ಪ್ರತಿಭಟನೆ, ಮನವಿ ಸಲ್ಲಿಸಿದ್ದರೂ ಈ ಬಗ್ಗೆ ಕೇಂದ್ರಕ್ಕೆ ಸರಿಯಾದ ಮಾಹಿತಿ ನೀಡುವಲ್ಲಿ ರಾಜ್ಯ ವಿಫಲವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಕೇಂದ್ರದಲ್ಲಿ ಬಿಜೆಪಿಯ 25 ಸಂಸದರಿದ್ದು, ಈ ಬಗ್ಗೆ ಸಂಸತ್‌ನಲ್ಲಿ ಚಕಾರ ಎತ್ತಿಲ್ಲ. ಈ ಅಧಿಸೂಚನೆ ಪ್ರಕಾರ ರಾಜ್ಯದ 10 ಜಿಲ್ಲೆಗಳ 1.572 ಗ್ರಾಮಗಳು ಒಳಪಡುತ್ತವೆ. ಇದರಲ್ಲಿ ಚಿಕ್ಕಮಗಳೂರು ಜಿಲ್ಲೆಯ 142 ಗ್ರಾಮಗಳು ಸೇರಿವೆ. ಚಿಕ್ಕಮಗಳೂರಿನ 32, ಕೊಪ್ಪ 32, ಮೂಡಿಗೆರೆ 26, ನರಸಿಂಹರಾಜಪುರ 31, ಶೃಂಗೇರಿ 21 ಗ್ರಾಮಗಳು ಒಳಪಡುತ್ತವೆ. ಇದರಿಂದ ಜಿಲ್ಲೆಯ ಲಕ್ಷಾಂತರ ಜನ ಬೀದಿಗೆ ಬೀಳಲಿದ್ದಾರೆ ಎಂದು ಮುಖಂಡರು ಆತಂಕ ವ್ಯಕ್ತಪಡಿಸಿದರು.