ಚಿಕ್ಕಮಗಳೂರು: ಚಿಕ್ಕಮಗಳೂರಲ್ಲಿ ಹಿಂದೂ ಪರ ಸಂಘಟನೆಗಳಾದ ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ದತ್ತಾಮಾಲ ಅಭಿಯಾನ ಅದ್ಧೂರಿಯಾಗಿ ಜರುಗುತ್ತಿದೆ. ಇಂದು ದತ್ತಪೀಠದಲ್ಲಿ 15 ಸಾವಿರಕ್ಕೂ ಅಧಿಕ ಭಕ್ತಾಧಿಗಳು ದತ್ತ ಪೀಠಕ್ಕೆ ಭೇಟಿ ನೀಡಿ ಪಾದುಕೆಯ ದರ್ಶನ ಪಡೆದರು.
ದತ್ತಮಾಲಾ ಅಭಿಯಾನ ಆರಂಭವಾಗಿದೆ. ಇದೇ ಸಂದರ್ಭದಲ್ಲಿ ಮಾತನಾಡಿದ ಸಚಿವ ಸಿ.ಟಿ. ರವಿ ಅವರು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರು ಬೇಗ ಗುಣಮುಖರಾಗಲಿ ಎಂದೂ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ನಮ್ಮ ಮಧ್ಯೆ ವೈಚಾರಿಕ ಭೇದ ಇರಬಹುದು ಆದರೆ ವ್ಯಕ್ತಿಗತವಾಗಿ ಯಾವುದೇ ದ್ವೇಷವಿಲ್ಲ. ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದರು.
ಇನ್ನು, ಬದುಕಿನಲ್ಲಿ ಪದವಿ, ಅಂತಸ್ತು, ಹಣ, ಇದ್ಯಾವುದೂ ಸ್ಥಿರವಲ್ಲ. ಅಸ್ಥಿರವಾದ ಬದುಕಿನಲ್ಲಿ ಸತ್ಯದ ಪ್ರತಿಪಾದನೆ ಮಾಡೋದೇ ಬದುಕಿನ ಶ್ರೇಷ್ಟ ಕಾರ್ಯ ಆಗಬೇಕು. ಮತದ ಆಸೆಗಾಗಿ ಸುಳ್ಳಿನ ಪ್ರತಿಪಾದನೆ ಮಾಡಬಾರದು. ಸುಳ್ಳಿನ ಪ್ರತಿಪಾದನೆ ಮಾಡಿದರೇ ಆ ದೇವರು ಹಾಗೂ ಜನರು ಕ್ಷಮಿಸೋದಿಲ್ಲ. ಇದು ನನಗೂ ಸೇರಿದಂತೆ ಮಾಜಿ ಮುಖ್ಯಮಂತ್ರಿಗೂ ಅನ್ವಯ ಆಗುತ್ತದೆ. ಸಿದ್ದರಾಮಯ್ಯ ಅವರು ಶೀಘ್ರ ಗುಣಮುಖರಾಗಿ ಬರಲಿ ಎಂದು ಆಶಿಸಿದರು.
ಬಳಿಕ ಮಾತನಾಡಿದ ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಪೂರ್ಣವಾಗಿ ಅಧಿಕಾರಕ್ಕೆ ಬಂದಿರೋದು ತುಂಬಾ ಖುಷಿಯಾಗಿದೆ ಎಂದರು. ಸಚಿವ ಸ್ಥಾನವನ್ನು ನನಗೇ ಕೋಡಲೇಬೇಕು ಎಂಬುದು ಮುಖ್ಯವಲ್ಲ. ನಮ್ಮ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ಮುಖ್ಯವಾಗುತ್ತಾರೆ. ನಾನು ಸಚಿವ ಸ್ಥಾನ ನೀಡಿ ಎಂದೂ ಕೇಳಿಕೊಂಡಿದ್ದೇನೆ. ನಮ್ಮ ಸರ್ಕಾರ ಇರೋದರಿಂದ ಹೆಚ್ಚು ಕೆಲಸ ಮಾಡಬಹುದು. ನಾನು ಸಿಎಂ ಯಡಿಯೂರಪ್ಪನವರ ಹಿತೈಷಿ ಹಾಗೂ ಅವರ ಶಿಷ್ಯ. ಮಾನಸ ಪುತ್ರ ಎಂದಿದ್ದಕ್ಕೆ ಬೇರೆ ಅರ್ಥ ಕಲ್ವಿಸೋದು ಬೇಡವೆಂದು ಹೇಳಿದರು.