ಚಿಕ್ಕಮಗಳೂರು: ಸಾಲು ಸಾಲು ಸರ್ಕಾರಿ ರಜೆ ಬಂದ ಹಿನ್ನೆಲೆ ಕಾಫಿನಾಡು ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ದತ್ತಪೀಠ ಹಾಗೂ ಸೀತಾಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಕಲ್ಲತ್ತಿಗರಿಗೆ ಬಂದ ಪ್ರವಾಸಿಗರ ಸಂಖ್ಯೆ ಲೆಕ್ಕಕ್ಕಿಲ್ಲದಂತಾಗಿದೆ. 390 ಬೈಕ್, 2911 ಕಾರುಗಳು, 198 ಟಿಟಿ ಹಾಗೂ 45ಕ್ಕೂ ಹೆಚ್ಚು ಮಿನಿ ಬಸ್‍ಗಳು ಕಾಫಿನಾಡಲ್ಲಿ ಜಮಾಯಿಸಿದ್ದವು. ಅಂದಾಜು 18 ಸಾವಿರ ಜನ ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ.
ಇಂದು ಚಿಕ್ಕಮಗಳೂರಿನ ಮುಳ್ಳಯ್ಯಗಿರಿಗೆ ಸಾವಿರಾರು ಜನ ಪ್ರವಾಸಿಗರು ತಮ್ಮ ಪ್ರೀತಿ ಪಾತ್ರರ ಜೊತೆ ಪಯಣ ಬೆಳೆಸಿದ್ರು. ಬೆಳ್ಳಂಬೆಳ್ಳಗೆಯೇ ಮುಳ್ಳಯ್ಯನಗಿರಿಯ ಸೌಂದರ್ಯ ಅನುಭವಿಸಲು ಬೆಂಗಳೂರು ಸೇರಿದಂತೆ ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಸಾವಿರಾರು ಪ್ರವಾಸಿಗರು ಗಿರಿಯತ್ತ ಮುಖ ಮಾಡಿದ್ರು.
ಹಾಗಾಗಿ, ಚಿಕ್ಕಮಗಳೂರು ತಾಲೂಕಿನ ಕೈಮರ ಚೆಕ್ಪೋಸ್ಟ್ ಬಳಿ ಕೀಲೋಮೀಟರ್ ಗಟ್ಟಲೇ ವಾಹನಗಳು ಜಾಮ್ ಆಗಿದ್ವು. ಕೊನೆಗೂ ಟ್ರಾಫಿಕ್ ಕಿರಿಕಿರಿ ತಪ್ಪಿಸಿಕೊಂಡು ಮುಂದೆ ನಡೆದಾಗ ಪ್ರವಾಸಿಗರನ್ನ ಬರಮಾಡಿಕೊಂಡಿದ್ದು ದಟ್ಟನೆಯ ಮಂಜು, ಮೈಕೊರೆಯುವ ತಂಗಾಳಿ, ಕಣ್ಣು ಹಾಯಿಸಿದಷ್ಟು ಎತ್ತರ ಕಾಣೋ ಬೆಟ್ಟಗುಡ್ಡಗಳು.
ಒಮ್ಮೆಲೇ ಮಂಜಿನ ಹೊದಿಕೆ, ಮತ್ತೊಮ್ಮೆ ಮಂಜು ಮಾಯವಾಗಿ ಸ್ವಚ್ಛಂದವಾಗಿ ಗೋಚರಿಸುವ ವಾತಾವರಣ. ಈ ಆಹ್ಲಾದಕರ ವಾತಾವರಣದಲ್ಲಿ ಸ್ನೇಹಿತರ ಜೊತೆ ಸಂಬಂಧಿಕರ ಜೊತೆ ಸಂಚರಿಸಿ ಸುಮಧುರ ಕ್ಷಣಗಳನ್ನ ಹಸಿರಾಗಿಸಿಕೊಂಡ್ರು.