ಚಿಕ್ಕಮಗಳೂರು:ಕಾಫಿನಾಡು ಚಿಕ್ಕಮಗಳೂರಲ್ಲಿ ಮಳೆ ಮುಂದುವರೆದಿದೆ. ಮಳೆಯ ಅಬ್ಬರಕ್ಕೆ ಮನೆಯ ಗೋಡೆಗಳು ಕುಸಿದು ಬಿದ್ದಿದ್ದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹೆಗ್ಗಾರು ಗ್ರಾಮದಲ್ಲಿ ಎರಡು ಮನೆ ಕುಸಿತವಾಗಿದೆ.
ಕಾಫಿನಾಡಿನಲ್ಲಿ ವರುಣನ ಆರ್ಭಟ, ಜನಜೀವನ ಅಸ್ತವ್ಯಸ್ತ
ಕಾಫಿನಾಡು ಚಿಕ್ಕಮಗಳೂರಿನಲ್ಲಿ ವರುಣ ತನ್ನ ಆರ್ಭಟವನ್ನು ಮತ್ತೆ ಮುಂದುವರಿಸಿದ್ದಾನೆ. ಜನಜೀವನ ಸುಧಾರಿಸಿತು ಅನ್ನುವಷ್ಟರಲ್ಲೇ ಮತ್ತೆ ಸುರಿದ ಮಳೆಗೆ ಜನರು ಹೈರಾಣಾಗಿದ್ದಾರೆ. ಹಲವೆಡೆ ಮನೆ ಕುಸಿತವಾಗಿದ್ದು, ಜನ ಜೀವನ ದುಸ್ತರವಾಗಿದೆ.
ಶ್ರೀಧರ ಎಂಬುವರ ವಾಸದ ಮನೆ ಹಾಗೂ ಕೊಟ್ಟಿಗೆ ಕುಸಿತವಾಗಿದ್ದು ಅದೇ ಗ್ರಾಮದ ಜಯಲಕ್ಷ್ಮಿ ಎಂಬುವರ ಮನೆ ಸಂಪೂರ್ಣ ನೆಲಸಮವಾಗಿದೆ. ಇಡೀ ರಾತ್ರಿ ಧಾರಾಕಾರ ಮಳೆ ಸುರಿದಿದ್ದು ಕಡೂರು, ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಎನ್.ಆರ್ ಪುರ ಭಾಗಗಳಲ್ಲಿ ಮಳೆಯಾಗಿದೆ. ಚಿಕ್ಕಮಗಳೂರಿನಲ್ಲಿ ಮಳೆಯಿಂದ ಮನೆಗಳು ಧರೆಗುರುಳುತ್ತಿದ್ದು ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ಥ ಉಂಟಾಗುತ್ತಿದೆ.
ಇತ್ತ ಬಯಲುಸೀಮೆ ಭಾಗದಲ್ಲಿ ಮಳೆ ಅವಾಂತರ ಸೃಷ್ಟಿ ಮಾಡುತ್ತಿದ್ದು ಮೋಟಾರ್ ಇಟ್ಟು ಮನೆಯ ಮಾಲೀಕರು ನೀರು ಹೊರ ಹಾಕುತ್ತಿದ್ದಾರೆ. ತರೀಕೆರೆ ತಾಲೂಕಿನ ಶಿವನಿ ರೈಲ್ವೆ ಸ್ಟೇಷನ್ ಬಳಿಯ ಮನೆಗಳು ಇದಾಗಿದ್ದು ಮಳೆ ನಿಂತರೂ ನೀರು ಬರೋದು ಮಾತ್ರ ನಿಂತಿಲ್ಲ. ಎರಡು ದಿನದ ಹಿಂದೆ ಸುರಿದ ಭಾರೀ ಮಳೆಯಿಂದ ತರೀಕೆರೆ ಭಾಗದ ಹಲವು ಪ್ರದೇಶ ಜಲಾವೃತವಾಗಿತ್ತು. ಚರಂಡಿ ತೆಗೆದ್ರು ನೀರು ಹೊರ ಹೋಗುತಿರಲಿಲ್ಲ. ನೀರು ಹೊರ ಹಾಕಲು ಮನೆ ಮಾಲೀಕರು ಪರದಾಟ ನಡೆಸಿದ್ದಾರೆ. ಇನ್ನು ತರೀಕೆರೆ ತಾಲೂಕಿನ ಶಿವನಿ ಗ್ರಾಮದಲ್ಲಿಯೂ ಇದೆ ಪರಿಸ್ಥಿತಿ ನಿರ್ಮಾಣವಾಗಿದೆ.