ಚಿಕ್ಕಮಗಳೂರು: ಮಗಳ ಮನೆಗೆ ಗೌರಿ - ಗಣೇಶ ಹಬ್ಬದ ಬಾಗಿನ ಕೊಟ್ಟು, ವಾಪಸ್ ಆಗುತ್ತಿದ್ದ ವೇಳೆ ಟಿವಿಎಸ್ ಹಾಗೂ ಗ್ಯಾಸ್ ಲಾರಿ ನಡುವೆ ಅಪಘಾತ ಸಂಭವಿಸಿ ಅಪ್ಪ, ಮಗಳು ಸಾವನ್ನಪ್ಪಿದ್ದಾರೆ. ಹಬ್ಬದ ದಿನವೇ ಚಿಕ್ಕಮಗಳೂರು ತಾಲೂಕಿನ ಉದ್ದೇಬೋರನಹಳ್ಳಿ ಬಳಿ ಮನಕಲಕುವ ಘಟನೆ ಸಂಭವಿಸಿದೆ.
ಜಯಣ್ಣ (58) ಹಾಗೂ ರಕ್ಷಿತಾ (19) ಮೃತ ದುರ್ದೈವಿಗಳಾಗಿದ್ದಾರೆ. ಗೌರಿ - ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಜಯಣ್ಣ ತಮ್ಮ ದೊಡ್ಡ ಮಗಳ ಮನೆಗೆ ಬಾಗಿನ ನೀಡಲೆಂದು ಚಿಕ್ಕ ಮಗಳು ರಕ್ಷಿತಾ ಜೊತೆ ಟಿವಿಎಸ್ ಬೈಕ್ನಲ್ಲಿ ತೆರಳಿದ್ದರು. ಪಿಳ್ಳೇನಹಳ್ಳಿಯ ಮಗಳ ಮನೆಯಿಂದ ತಮ್ಮ ಊರಾದ ಮುಗುಳವಳ್ಳಿಗೆ ವಾಪಸ್ ಆಗುವಾಗ ಮಾರ್ಗ ಮಧ್ಯೆ ಉದ್ದೇಬೋರನಹಳ್ಳಿ ಬಳಿ ಅಪಘಾತವಾಗಿದೆ. ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.