ಚಿಕ್ಕಮಗಳೂರು:ಹಿರಿಯ ರಾಜಕಾರಣಿ, ಮಾಜಿ ಸಚಿವರಾಗಿದ್ದ ಡಿ. ಬಿ. ಚಂದ್ರೇಗೌಡರು ಹಾಗೂ ನನ್ನ ಸ್ನೇಹ ಪಕ್ಷಾತೀತವಾಗಿತ್ತು ಹಾಗೂ ಆತ್ಮೀಯವಾಗಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗಾಗಿ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ ಚಂದ್ರೇಗೌಡರು ಹೊಸ ರಾಜಕೀಯಕ್ಕೆ ಸಾಕ್ಷಿಯಾಗಿದ್ದರು ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಭಿಮಾನದ ಮಾತುಗಳನ್ನಾಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹಾಂದಿಯ ಸಹರಾ ಶಾದಿ ಮಹಲ್ನಲ್ಲಿ ಆಯೋಜಿಸಿದ್ದ ಇತ್ತೀಚೆಗೆ ನಿಧನ ಹೊಂದಿದ ರಾಜಕೀಯ ಮುತ್ಸದ್ಧಿ ಡಿ ಬಿ ಚಂದ್ರೇಗೌಡರ 11ನೇ ದಿನದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಿಎಸ್ವೈ, ಚಂದ್ರೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ನಮಸ್ಕರಿಸಿದರು. ನಂತರ ಮಾತನಾಡಿದ ಅವರು, 1983ರಲ್ಲಿ ಡಿ ಬಿ ಚಂದ್ರೇಗೌಡ ಅವರು ರೈತರಿಗಾಗಿ ಅಭೂತಪೂರ್ವ ರ‍್ಯಾಲಿ ಆಯೋಜಿಸಿದ್ದರು. 2009ರಲ್ಲಿ ಬಿಜೆಪಿಯಿಂದ ಸಂಸದರಾಗಿ ಪಕ್ಷಕ್ಕೆ ಶಕ್ತಿ ತುಂಬಿದ್ದರು. ಸದನದಲ್ಲಿ ಅವರು ಮಾತಿಗೆ ನಿಂತರೆ ಹೊರಗಿದ್ದವರು ಒಳಗೆ ಬರುತ್ತಿದ್ದರು. ಹಲವು ಖಾತೆಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ್ದ ಕೀರ್ತಿ ಚಂದ್ರೇಗೌಡ ಅವರದ್ದಾಗಿದೆ ಎಂದು ಹೇಳಿದರು.
ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿ ಎಸ್ ಯಡಿಯೂರಪ್ಪ ಅವರ ಚಲನವಲನ ಎಂದಿಗಿಂತ ಹೆಚ್ಚು ಉತ್ಸಾಹದಾಕವಾಗಿ ಕಂಡು ಬಂತು. ಪುತ್ರ ಬಿ. ವೈ. ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ದೊರೆಯುತ್ತಿದ್ದಂತೆ ಬಿ.ಎಸ್. ಯಡಿಯೂರಪ್ಪ ಅವರು ಫುಲ್ ಆ್ಯಕ್ಟಿವ್ ಆಗಿದ್ದಾರೆ ಎನ್ನುವ ಮಾತುಗಳೂ ಈ ವೇಳೆ ಕೇಳಿಬಂದವು.