ಚಿಕ್ಕಮಗಳೂರು:ಆರೋಗ್ಯದ ಸಂದಿಗ್ದ ಪರಿಸ್ಥಿತಿಯಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಆಂಬ್ಯುಲೆನ್ಸ್ ವಾಹನ ಸೇವೆಯನ್ನು ಸರ್ಕಾರ ಒದಗಿಸುತ್ತಿದೆ. ಸಾರ್ವಜನಿಕರ ಬಳಕೆಗಾಗಿ ಇರುವ ಆಂಬ್ಯುಲೆನ್ಸ್ ವಾಹನ ತೆಗೆದುಕೊಂಡು ಪ್ರವಾಸಕ್ಕೆ ಹೊರಟಿದ್ದ ಚಾಲಕ ಸೇರಿ ಏಳು ಜನರನ್ನು ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಪಘಾತ ಸಂಭವಿಸಿದ ವೇಳೆ ಅಥವಾ ಅನಾರೋಗ್ಯದಿಂದ ಅಸ್ವಸ್ಥರಾಗಿದ್ದ ವೇಳೆ ಜನರನ್ನು ತುರ್ತಾಗಿ ಆಸ್ಪತ್ರೆಗೆ ಸೇರಿಸುವ ಆಂಬ್ಯುಲೆನ್ಸ್ ವಾಹನವನ್ನು ಜಾಲಿ ಟ್ರಿಪ್ಗೆ ಬಳಸಿದ್ದ ಚಾಲಕನನ್ನು ಬೆಳ್ತಂಗಡಿ ಸಂಚಾರಿ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಆಂಬ್ಯುಲೆನ್ಸ್ ಚಾಲಕ ಸೇರಿ ಆರು ಸ್ನೇಹಿತರ ಜಾಲಿಟ್ರಿಪ್: ಆಂಬ್ಯುಲೆನ್ಸ್ನ ಚಾಲಕ ಸೇರಿ ತನ್ನ ಆರು ಮಂದಿ ಗೆಳೆಯರು ಸೇರಿಕೊಂಡು ಬೆಂಗಳೂರಿನಿಂದ ಧರ್ಮಸ್ಥಳ, ಉಡುಪಿ ದೇವಸ್ಥಾನಕ್ಕೆ ಟ್ರಿಪ್ ಹೊರಟಿದ್ದರು. ಆದರೆ ಕೊಟ್ಟಿಗೆಹಾರ ದಾಟಿ ಆಂಬ್ಯುಲೆನ್ಸ್ ಉಜಿರೆಗೆ ಬರುತ್ತಿದ್ದಂತೆ ವಾಹನ ಸೇರಿ ಏಳು ಜನ ಸ್ನೇಹಿತರನ್ನು ಬೆಳ್ತಂಗಡಿ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನಿಂದ ಕೊಟ್ಟಿಗೆಹಾರ ಮಾರ್ಗವಾಗಿ ಚಾರ್ಮಾಡಿ ಘಾಟ್ ಮೂಲಕ ಉಜಿರೆ ಕಡೆ ಆಂಬ್ಯುಲೆನ್ಸ್ನಲ್ಲಿ ಒಟ್ಟು ಏಳು ಜನ ಬರುತ್ತಿರುವ ಮಾಹಿತಿ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅರ್ಜುನ್ ಅವರಿಗೆ ಮಾಹಿತಿ ಲಭ್ಯವಾಗಿತ್ತು. ಉಜಿರೆ ಬೀಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಮ್ಮ ಠಾಣೆಯ ಸಿಬ್ಬಂದಿ ಸುನಿಲ್ಗೆ ತಕ್ಷಣ ಮಾಹಿತಿ ನೀಡಿ, ಆಂಬ್ಯುಲೆನ್ಸ್ ಹಾಗೂ ಏಳು ಜನರನ್ನು ವಶಕ್ಕೆ ಪಡೆಯಲು ಸೂಚಿಸಿದ್ದರು.
ಪೊಲೀಸ್ ಅಧಿಕಾರಿ ಸೂಚನೆ ಮೇರೆಗೆ ಪೊಲೀಸ್ ಸಿಬ್ಬಂದಿ ಆಂಬ್ಯುಲೆನ್ಸ್ ತಡೆದು ಠಾಣೆಗೆ ಕರೆತಂದಿದ್ದಾರೆ. ಆಂಬ್ಯುಲೆನ್ಸ್ ಠಾಣೆಗೆ ಏಳು ಜನರನ್ನು ಪೊಲೀಸರು ವಿಚಾರಿಸಿದ ವೇಳೆ ಬೆಂಗಳೂರಿನಿಂದ ಧರ್ಮಸ್ಥಳ ,ಉಡುಪಿ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಪ್ರವಾಸ ಮಾಡುತ್ತಿದ್ದೆವು ಎಂದು ಪೊಲೀಸರ ಎದುರು ಒಪ್ಪಿಕೊಂಡಿದ್ದಾರೆ. ಚಾಲಕನಿಂದ ಆಂಬ್ಯುಲೆನ್ಸ್ ದುರ್ಬಳಕೆ ಮಾಡಿರುವ ಕುರಿತಾಗಿ ದೂರು ದಾಖಲಿಸಿಕೊಂಡ ಸಂಚಾರಿ ಪೊಲೀಸರು, ಚಾಲಕನಿಗೆ 4,500 ರೂ. ದಂಡ ವಿಧಿಸಿದ್ದಾರೆ.
ಇದನ್ನೂ ಓದಿ:ಅಂತಾರಾಜ್ಯ ನಕಲಿ ಉದ್ಯೋಗ ದಂಧೆ ಭೇದಿಸಿದ ಸಿಬಿಐ; ಬೆಂಗಳೂರಿನ ವ್ಯಕ್ತಿ ಸೇರಿದಂತೆ ಮೂವರ ಬಂಧನ