ಚಿಕ್ಕಮಗಳೂರು:ಕಾಫಿನಾಡಿನ ಭೂಮಿ ಭೂಲೋಕದ ತೋಟವೆಂದರೆ ತಪ್ಪಿಲ್ಲ. ಇಲ್ಲಿ ಚಳಿಗಾಲದ ವಿಶೇಷ ಅತಿಥಿ ಅಂದರೆ ಅದುವೇ ಕಾಡು ಮಲ್ಲಿಗೆ. ಇತರೆ ಪುಪ್ಪಗಳಿಗಿಂತ ತಾನೇನೂ ಕಮ್ಮಿಯಿಲ್ಲವೆಂಬಂತೆ ಇದು ಕೂಡ ತನ್ನ ಸೊಬಗಿನ ಜೊತೆ ಸುವಾಸನೆಯನ್ನೂ ಬೀರುತ್ತದೆ. ಹಾಲಿನ ನೊರೆಯಂತೆ ಹೊಳೆಯುವ ಈ ಹೂವು ವರ್ಷದ ಒಂದು ತಿಂಗಳು ಮಾತ್ರ ಕಾಣಲು ಸಾಧ್ಯ.
ಮಲೆನಾಡಿನ ದಟ್ಟಾರಣ್ಯದಲ್ಲಿ ಸಿಗುವ ಈ ಬಿಳಿ ಕಾಡು ಮಲ್ಲಿಗೆ, ಚಳಿಗಾಲದಲ್ಲಿ ಮಾತ್ರ ಅರಳಿ ಜನರನ್ನು ಆಕರ್ಷಿಸುತ್ತದೆ. ಕಾಫಿ ತೋಟಗಳ ನಡುವೆ ಅರಳೋ ಈ ಕಾಡು ಮಲ್ಲಿಗೆ ಎಲ್ಲಾ ಋತುವಿನಲ್ಲೂ ಅರಳುವುದಿಲ್ಲ. ಡಿಸೆಂಬರ್ನಲ್ಲಿ ಮಾತ್ರ ಇದರ ಜನನ. ಪ್ರವಾಸಿಗರಿಗೆ, ದಾರಿಹೋಕರಿಗೆ, ಸೌಂದರ್ಯ ಪ್ರಿಯರ ಮನಸ್ಸಿಗೆ ಈ ಕಾಡು ಮಲ್ಲಿಗೆ ಮುದ ನೀಡುತ್ತದೆ. ಈ ಹೂವನ್ನು ಮದ್ರಾಸಿ ಹೂವು ಅಂತಲೂ ಕೆಲವರು ಕರೆಯುತ್ತಾರೆ.