ಚಿಕ್ಕಮಗಳೂರು :ಒಡಿಶಾದ ಬಾಲಸೋರ್ ಜಿಲ್ಲೆಯ ಬಹಾನಗರ್ನಲ್ಲಿಶುಕ್ರವಾರ ರಾತ್ರಿ ನಡೆದ ಭೀಕರ ರೈಲು ದುರಂತದಲ್ಲಿ 280ಕ್ಕೂ ಹೆಚ್ಚು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದು, ಸುಮಾರು 800ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಪಘಾತಕ್ಕೀಡಾದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ 110 ಜನ ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.
ಕಳಸ ತಾಲೂಕಿನ ಹೊರನಾಡು, ಸಂಸೆ, ಕುದುರೆಮುಖ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಸೇರಿದ 110 ಮಂದಿ ಉತ್ತರ ಭಾರತದ ತೀರ್ಥಕ್ಷೇತ್ರಗಳ ದರ್ಶನಕ್ಕೆ ಹೋಗಿದ್ದರು. ಅವರು ಗುರುವಾರ ಯಶವಂತಪುರ ರೈಲು ನಿಲ್ದಾಣದಿಂದ ಯಶವಂತಪುರ - ಹೌರಾ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದರು. ಅಪಘಾತ ನಡೆಯುವ ಕೆಲವು ಗಂಟೆಗಳ ಹಿಂದೆ ರೈಲಿನ ಬೋಗಿಗಳ ಇಂಜಿನ್ ಬದಲಾವಣೆ ಮಾಡಲಾಗಿತ್ತು. ಹಿಂದಿನ ಬೋಗಿಯಲ್ಲಿದ್ದ 110 ಯಾತ್ರಿಕರು ರೈಲಿನ ಎಸ್3, ಎಸ್ 4 ಬೋಗಿಗಳಲ್ಲಿ ಇದ್ದರು. ಅದೃಷ್ಟವಶಾತ್ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ಕುರಿತು ಪ್ರಯಾಣಿಕ ಸಂತೋಷ್ ಜೈನ್ ಮಾಹಿತಿ ನೀಡಿದ್ದು, ಅಪಘಾತಕ್ಕೀಡಾದ ಬೆಂಗಳೂರು-ಹೌರಾ ರೈಲಿನಲ್ಲಿದ್ದ ಚಿಕ್ಕಮಗಳೂರು ಜಿಲ್ಲೆಯ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದೇವೆ. ನಾವು ಪ್ರಯಾಣಿಸುತ್ತಿದ್ದ ಬೆಂಗಳೂರು-ಹೌರಾ ರೈಲು ಒಡಿಶಾ ಗಡಿ ಪಾಸ್ ಆಗಿ ಕೋಲ್ಕತ್ತಕ್ಕೆ ಹೋಗಬೇಕಿತ್ತು. ಪ್ರಯಾಣವೂ ಚೆನ್ನಾಗಿಯೇ ಆಗುತ್ತಿತ್ತು. ಆದರೆ ರಾತ್ರಿ 8:30ರ ಹೊತ್ತಿಗೆ ರೈಲು ಒಮ್ಮೆಲೇ ನಿಂತುಬಿಡ್ತು. ಬಸ್ ಅಪಘಾತವಾದಾಗ ಹೇಗೆ ಶಬ್ದ ಬರುತ್ತದೆಯೋ, ಹಾಗೇ ಶಬ್ದ ಬಂತು. ಡಿಕ್ಕಿಯ ರಭಸಕ್ಕೆ ನಮ್ಮ ರೈಲಿನ ಕೆಲವು ಬೋಗಿಗಳು ಉರುಳಿ ಬಿದ್ದಿದ್ದವು ಎಂದರು.
ಅವುಗಳಲ್ಲಿ ಇದ್ದವರಿಗೆ ಗಾಯವಾಗಿತ್ತು. ಕೆಲವರು ಸ್ಥಳದಲ್ಲೇ ಮೃತಪಟ್ಟರು. ರಾತ್ರಿ 12ರ ಹೊತ್ತಿಗೆ ಕೋಲ್ಕತ್ತಕ್ಕೆ ಬೇರೆ ರೈಲಿನ ವ್ಯವಸ್ಥೆ ಮಾಡಿದ್ದರು. ಹೀಗಾಗಿ 110 ಜನ ಯಾತ್ರಿಗಳು ಸುರಕ್ಷಿತವಾಗಿ ಕೋಲ್ಕತ್ತಾ ತಲುಪಿದ್ದೇವೆ. ಅಲ್ಲಿಂದ ಮೂರು ಬಸ್ಗಳ ಮೂಲಕ ಶಿಖರಜಿಗೆ ಪ್ರಯಾಣ ಬೆಳೆಸಿದ್ದೇವೆ. ನಾವೆಲ್ಲರೂ ಸೇಫ್ ಆಗಿದ್ದು, ಯಾತ್ರೆ ಮುಗಿಸಿ, ದೇವರ ದರ್ಶನ ಪಡೆದೇ ಬರುತ್ತೇವೆ ಎಂದು ತಿಳಿಸಿದ್ದಾರೆ.
ಚಾಮರಾಜನಗರದ ಇಬ್ಬರು ಯುವಕರು ಪಾರು:ಮತ್ತೊಂದೆಡೆ ಇದೇ ರೈಲು ದುರಂತದಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಇಬ್ಬರು ಯುವಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಮಾಹಿತಿ ಲಭ್ಯವಾಗಿದೆ. ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ಮಹೇಶ್ ಹಾಗೂ ಪವನ್ ಎಂಬ ಯುವಕರು ಅಪಘಾತಕ್ಕೀಡಾದ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಕರ್ನಾಟಕದ ಜನರನ್ನು ಕರೆತರಲು ಹೋಗಿರುವ ಸಚಿವ ಸಂತೋಷ್ ಲಾಡ್ ಜೊತೆಗೆ ಗುಂಡ್ಲುಪೇಟೆ ಶಾಸಕ ಎಚ್. ಎಂ. ಗಣೇಶ್ ಪ್ರಸಾದ್ ತೆರಳಿದ್ದಾರೆ.
ಶಾಸಕ ಎಚ್.ಎಂ. ಗಣೇಶ್ ಪ್ರಸಾದ್ ಮಾತನಾಡಿ, ಯುವಕರಿಗೆ ನೆಟ್ ಬ್ಯಾಂಕಿಂಗ್ ಮೂಲಕ ಹಣ ನೀಡಲಾಗಿದೆ. ಪರ್ಯಾಯ ಮಾರ್ಗದಲ್ಲಿ ರಾಜ್ಯಕ್ಕೆ ಹಿಂತಿರುಗುವಂತೆ ತಿಳಿಸಲಾಗಿದೆ ಎಂದರು. ದುರಂತದಲ್ಲಿ ಪಾರಾದ ಮಹೇಶ್ ಅವರ ತಂದೆ ಮಹಾದೇವನಾಯ್ಕ ಮಾತನಾಡಿ, ಇಬ್ಬರು ಸೇನೆಯ ಪರೀಕ್ಷೆ ಬರೆಯಲು ತೆರಳಿದ್ದರು. ಅಪಘಾತವಾದ ರೈಲಿನಲ್ಲೇ ಇದ್ದರು, ಶಾಸಕ ಗಣೇಶ್ ಪ್ರಸಾದ್ ತುರ್ತಾಗಿ ಸ್ಪಂದಿಸಿ ಮಕ್ಕಳಿಗೆ ನೆರವಾಗಿದ್ದಾರೆ. ಅಪಘಾತ ನಡೆದ ಸ್ಥಳದಿಂದ 50 ಕಿ.ಮೀ ದೂರದಲ್ಲಿ ಈಗ ಬಂದಿದ್ದು, ಆದಷ್ಟು ಬೇಗ ಮನೆಗೆ ತಲುಪುವ ಭರವಸೆ ಇದೆ ಎಂದರು.
ಇದನ್ನೂ ಓದಿ:ಒಡಿಶಾ ರೈಲು ದುರಂತಕ್ಕೆ ಕಾರಣವೇನು.. ಹೊರಬಿತ್ತು ಪ್ರಾಥಮಿಕ ತನಿಖಾ ಮಾಹಿತಿ