ಚಿಕ್ಕಬಳ್ಳಾಪುರ:ಆರೋಗ್ಯ ಸಚಿವ ಸುಧಾಕರ್ ಅವರಿಗೆ ಸಂವಿಧಾನದ ಬಗ್ಗೆ ಮೌಲ್ಯ ಹಾಗೂ ಗೌರವವಿದ್ದಲ್ಲಿ ಕೂಡಲೇ ಆರೋಗ್ಯ ಸಚಿವರ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕಾಂಗ್ರೆಸ್ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ವತಿಯಿಂದ ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸುಧಾಕರ್ ಒಂದು ಕಾಲದಲ್ಲಿ ನನ್ನ ಸ್ನೇಹಿತನಾಗಿದ್ದ. ಆದರೆ, ಈಗ ರಾಜ್ಯದಲ್ಲಿ ಸಕಲ ಕಲಾ ವಲ್ಲಭನ್ನಾಗಿದ್ದಾನೆ. ಬಿಜೆಪಿ ಪಕ್ಷದಲ್ಲಿ ಸುಧಾಕರ್ನಿಂದ ಹಿಡಿದು ಕೊನೆಯ ಕಾರ್ಯಕರ್ತರವರೆಗೂ ಎಲ್ಲರೂ ಹಿಟ್ಲರ್ನಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.
ಸಂವಿಧಾನದ ಬಗ್ಗೆ ಗೌರವವಿದ್ದಲ್ಲಿ ಸುಧಾಕರ್ ರಾಜೀನಾಮೆ ನೀಡಬೇಕು: ವಿ.ಎಸ್ ಉಗ್ರಪ್ಪ ಸಾಮೂಹಿಕ ನಕಲು ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಸುಧಾಕರ್ ಅವರು ನನಗೆ ಮೊದಲೇ ಕೆಲವು ಕಾಲೇಜಿನ ಮೇಲೆ ಸಂಶಯವಿತ್ತು ಎಂದು ಹೇಳಿದ್ದರು. ಆದರೆ ಇದುವರೆಗೂ ಯಾವುದೇ ಕೇಸ್ ದಾಖಲಾಗಿಲ್ಲ. ಮೊದಲೇ ಸಂಶಯವಿತ್ತು ಅಂದ ಮೇಲೆ ಇನ್ನೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ಒಂದು ಕ್ಲಿನಿಕ್ ಸೆಂಟರ್ ತೆಗೆಯಲು 25 ಲಕ್ಷ ಕೊಟ್ಟರೆ ನಡೆಯುತ್ತದೆ ಎಂಬ ವದಂತಿಗಳಿವೆ. ಇದಕ್ಕೆಲ್ಲಾ ನೇರ ಹೊಣೆ ಸುಧಾಕರ್ ಆಗಬೇಕಾಗುತ್ತದೆ. ಅವರಿಗೆ ನೈತಿಕತೆ ಇದ್ದರೆ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕೇಸ್ ಮಾಡಿ ಅರೆಸ್ಟ್ ಮಾಡಬೇಕಿತ್ತು. ಆದರೆ, ಇದುವರೆಗೂ ಕೇಸ್ ದಾಖಲಾಗಿಲ್ಲ. ನೀವು ಸಕಲ ವಲ್ಲಭರಂತೆ ವರ್ತಿಸುವುದನ್ನು ಬಿಟ್ಟು ನೈತಿಕತೆ ತೋರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಶ್ವತ ನೀರಾವರಿ ಹೋರಾಟಗಾರ ಆಂಜನೇಯ ರೆಡ್ಡಿ ವಿಚಾರದಲ್ಲಿ ಆರೋಗ್ಯ ಸಚಿವರ ಮೇಲೆ ಪಿಸಿಆರ್ 10092/22 ಕಿಮಿನಲ್ ಪ್ರೋಸಿಜರ್ ದಾಖಲಾಗಿದೆ. ಅದರಲ್ಲಿ ಅಕ್ಯೂಸರ್ ನಂಬರ್ 1 ಸುಧಾಕರ್ ಅವರೇ ಆಗಿದ್ದಾರೆ. ನೀವು ಇನ್ನೂ ಯಾವ ಮುಖ ಇಟ್ಟುಕೊಂಡು ಮಂತ್ರಿಯಾಗಿ ಮುಂದುವರೆಯುತ್ತಿದ್ದೀರಾ? ಎಂದು ಪ್ರಶ್ನಿಸಿದರು.
ಆರ್ಎಸ್ಎಸ್ ಹಾಗೂ ಬಿಜೆಪಿಗೆ ಸಂವಿಧಾನದ ಮಾನವೀಯತೆ ಬದ್ದತೆ ಇದೆಯಾ? ಹಾಗೊಂದು ವೇಳೆ ಇದ್ದಲ್ಲಿ ಪ್ರಧಾನಿಗಳು, ಮುಖ್ಯಮಂತ್ರಿಗಳು ಸಚಿವ ಸುಧಾಕರ್ ನಿಂದ ರಾಜೀನಾಮೆ ಕೊಡಿಸಬೇಕೆಂದು ಒತ್ತಾಯಿಸಿದರು. ಇನ್ನು ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರದ ಗಂಗೋತ್ರಿಯೇ ಹರಿಯುತ್ತಿದೆ. ಜನರ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಪ್ರಯತ್ನ ನಡೆಯುತ್ತಿಲ್ಲ ಎಂದು ಉಗ್ರಪ್ಪ ಆರೋಪಿಸಿದರು.
ರಾಜಕಾರಣದಲ್ಲಿ ಗೆಲ್ಲುತ್ತೇವೆ ಎಂದು ಹುಮ್ಮಸ್ಸಿನಿಂದ ಸಹಜವಾಗಿ ಕುಮಾರಸ್ವಾಮಿ ಕೋಲಾರ, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುತ್ತೇನೆ ಎಂದು ಹೇಳಿದ್ದಾರೆ. ಆದರೆ ಸರ್ವೆ ರಿಪೋರ್ಟ್‌ನಲ್ಲಿ ಕಾಂಗ್ರೆಸ್ ಮುನ್ನಡೆ ಇದೆ. ರಾಜ್ಯದಲ್ಲಿ 224 ಕ್ಷೇತ್ರದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಇದೆ. ಈ ಬಾರೀ ಹೆಚ್ಚಿನ ಮತಗಳನ್ನು ಕಾಂಗ್ರೆಸ್ ಪಡೆಯಲಿದೆ. ಅಲ್ಲದೇ ಕಾಂಗ್ರೆಸ್ ಅಭ್ಯರ್ಥಿಯ ಅರ್ಜಿಗಳ ಸಂಖ್ಯೆ ನೋಡಿದರೆ ಕಾಂಗ್ರೆಸ್ ರಾಜ್ಯದಲ್ಲಿ ಪ್ರಬಲವಾಗಿದೆ. ಯಾರು ಏನೇ ಹೇಳಿದರೂ ಈ ಬಾರಿ ಚುನಾವಣೆಯಲ್ಲಿ ಬಿಜೆಪಿ ಮನೆಗೆ ಹೋಗುವುದು ಖಚಿತವಾಗಿದೆ ಎಂದರು.
ಇದನ್ನೂ ಓದಿ:ಗುಜರಾತ್ನಲ್ಲಿ ಬಿಜೆಪಿ ಆಂತರಿಕ ಸಮೀಕ್ಷೆ: ಕೇಸರಿ ಪಡೆಗೆ ಮತಗಳಿಕೆ ಉಳಿಸಿಕೊಳ್ಳುವ ಸವಾಲು