ಚಿಕ್ಕಬಳ್ಳಾಪುರ :ಮನೆಯಲ್ಲಿ ಯಾರೂ ಇಲ್ಲದ ವೇಳೆ ಪ್ರೇಯಸಿ ಜೊತೆ ಸೇರಿ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಕಳ್ಳರನ್ನು ಜಿಲ್ಲೆಯ ಚಿಂತಾಮಣಿ ಹಾಗೂ ಶಿಡ್ಲಘಟ್ಟ ಪೊಲೀಸರು ಬಂಧಿಸಿ 22 ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಮುಖ ಆರೋಪಿ ಕೋಲಾರ ಜಿಲ್ಲೆಯ ತೋಪನಹಳ್ಳಿ ಚಂದ್ರಪ್ಪ (49), ಗಂಗೋತ್ರಿ (28) ಹಾಗೂ ಚಿಂತಾಮಣಿ ನಗರದ ಬಾಬಾಜಾನ್ ಬಂಧಿತ ಆರೋಪಿಗಳು. ಮುನಿರಾಜು ಎಂಬ ಇನ್ನೋರ್ವ ಪರಾರಿಯಾಗಿದ್ದು, ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಚಂದ್ರಪ್ಪ ಹಾಗೂ ಸಹಚರರು ಚಿಂತಾಮಣಿ ಸೇರಿದಂತೆ ಶಿಡ್ಲಘಟ್ಟ ತಾಲೂಕು ವ್ಯಾಪ್ತಿಯಲ್ಲಿ ಬೀಗ ಹಾಕಿದ ಮನೆಗಳಿಗೆ ನುಗ್ಗಿ ರಾಡ್‌ಗಳಿಂದ ಒಡೆದು ಮನೆಯಿಲ್ಲಿದ್ದ ಬಂಗಾರ ಹಾಗೂ ನಗದನ್ನು ದೋಚಿ ಪರಾರಿಯಾಗುತ್ತಿದ್ದರು.
ಚಿಕ್ಕಬಳ್ಳಾಪುರದಲ್ಲಿ ಮನೆಗಳ್ಳರ ಬಂಧನ ಈವರೆಗೂ ಎರಡು ತಾಲೂಕು ವ್ಯಾಪ್ತಿಯಲ್ಲಿ ಕಳೆದ 3 ತಿಂಗಳಿಂದ 21 ಕಡೆ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದರು. ಸದ್ಯ ಬಂಧಿತರಿಂದ ಒಟ್ಟು 22 ಲಕ್ಷ ರೂ. ಮೌಲ್ಯದ 440 ಗ್ರಾಂ ಬಂಗಾರ ಹಾಗೂ 25 ಸಾವಿರ ರೂ. ಮೌಲ್ಯದ 300 ಗ್ರಾಂ ಬೆಳ್ಳಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಮೇಲೆ ಕೋಲಾರ ಜಿಲ್ಲೆ ಸೇರಿದಂತೆ ಹಲವೆಡೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿತ್ತು. ವಶಪಡಿಸಿಕೊಂಡ ವಸ್ತುಗಳನ್ನು ದೂರಿನ ಆಧಾರದಲ್ಲಿ ವಾರಸುದಾರರಿಗೆ ಜಿಲ್ಲಾವರಿಷ್ಠಾಧಿಕಾರಿ ಮಿಥುನ್ ಕುಮಾರ್ ನೇತೃತ್ವದಲ್ಲಿ ವಾಪಸ್ ನೀಡಲಾಯಿತು.
ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಎಸ್ಪಿ ಮಿಥುನ್ ಕುಮಾರ್ ಅಭಿನಂದನೆ ತಿಳಿಸಿ, ಪ್ರಶಂಸೆ ಪತ್ರ ನೀಡಿದರು ಹಾಗೂ ನಗದು ಬಹುಮಾನ ಘೋಷಿಸಿದರು.
ಓದಿ:ಆಸ್ಕರ್ ಪಾರ್ಥಿವ ಶರೀರ ಇಂದು ಬೆಂಗಳೂರಿಗೆ ಆಗಮನ : ಸಿದ್ಧತೆ ವೀಕ್ಷಿಸಿದ ಡಿಕೆಶಿ