ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ, ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ವಿ. ಯಶೋದಮ್ಮರವರನ್ನು ಆಯ್ಕೆ ಮಾಡಲಾಯಿತು.
ವಿ. ಯಶೋದಮ್ಮರವರು ಕಿರುತೆರೆ, ಚಲನಚಿತ್ರ, ಮತ್ತು ರಂಗಭೂಮಿ ಕಲಾವಿದೆ. ಇವರು 2018ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು 2017ರಲ್ಲಿ ನಾಡಪ್ರಭು ಕನ್ನಡ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ರಂಗಭೂಮಿಯಲ್ಲಿ ಸುಮಾರು 45 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಯಶೋದಮ್ಮ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿ ನಾಟಕಗಳನ್ನು ಪ್ರದರ್ಶಿಸಿದಲ್ಲದೆ, ನಾಟಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಯಶೋದಮ್ಮರವರು ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದೇವರಮಳ್ಳೂರು ಗ್ರಾಮದ ವೆಂಕಟರಾಯಪ್ಪ ಮತ್ತು ಕೆಂಪಮ್ಮ ದಂಪತಿಗಳ ಪುತ್ರಿ. ಪ್ರಾಥಮಿಕ ಶಿಕ್ಷಣವನ್ನು ದೇವರಮಳ್ಳೂರು ಹಾಗೂ ಪ್ರೌಢ ಶಿಕ್ಷಣವನ್ನು ಶಿಡ್ಲಘಟ್ಟ ನಗರದಲ್ಲಿ ಪೂರೈಸಿ ಬಳಿಕ ಚಿಂತಾಮಣಿ ಮುನ್ಸಿಪಾಲ್ ಕಾಲೇಜಿನಲ್ಲಿ ಬಿಎ , ಹಿಂದಿ , ಸಂಸ್ಕೃತ ಕಾವ್ಯಗಳಲ್ಲಿ ವಿದ್ಯಾಭ್ಯಾಸವನ್ನು ಪಡೆದಿರುತ್ತಾರೆ. ಗೋರೂರು ಚೆನ್ನಬಸಪ್ಪನವರ ಬೆಳ್ಳಕ್ಕಿ ಹಿಂಡು ಬೇದರ್ಯಾವು, ಸಂಗ್ಯಾ ಬಾಳ್ಯಾ, ಸಿದ್ದನಗೌಡ ಪಾಟೀಲರ ಬೀದಿನಾಟಕಗಳು, ಶ್ರೀಮತಿ ನಾಗರತ್ನಮ್ಮರವರೊಂದಿಗಿನ ಶ್ರೀಕೃಷ್ಣಗಾರುಡಿ ಸೇರಿ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ.