ಚಿಕ್ಕಬಳ್ಳಾಪುರ:ಪುರಾಣ ಪ್ರಸಿದ್ಧ ಐತಿಹಾಸಿಕ ಯೋಗ ಮತ್ತು ಭೋಗ ನಂದೀಶ್ವರ ದೇವಾಲಯ ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿದೆ. ಪ್ರತಿ ವರ್ಷ ಮಹಾಶಿವರಾತ್ರಿಗೆ ದೇವಾಲಯದ ಜೋಡಿ ಕಲ್ಲಿಗಾಲಿಗಳ ರಥೋತ್ಸವ ನಡೆಯುತ್ತದೆ. ಇದು ದೇವಾಲಯದ ಕಳಶಪ್ರಾಯ ಕಾರ್ಯಕ್ರಮ. ಈ ರಥೋತ್ಸವ ವೀಕ್ಷಿಸಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಜೋಡಿ ಕಲ್ಲುಗಾಲಿ ರಥ ಮುರಿದು ಬಿದ್ದು ಅವಘಡ ಸಂಭವಿಸಿದೆ.
ಚಿಕ್ಕಬಳ್ಳಾಪುರ ಬಯಲು ಸೀಮೆ ಜಿಲ್ಲೆ. ಇಲ್ಲಿ ಯಾವುದೇ ನದಿ ನಾಲೆಗಳಿಲ್ಲದೇ ಬರದ ನಾಡು ಎಂಬ ಕುಖ್ಯಾತಿ ಪಡೆದಿದೆ. ಆದರೆ ಇತ್ತೀಚೆಗೆ ಬೆಂಗಳೂರು ಕೊಳಚೆ ನೀರು ಶುದ್ಧೀಕರಿಸಿ ಜಿಲ್ಲೆಯ ಹಲವು ಕೆರೆಗಳನ್ನು ತುಂಬಿಸಲಾಗಿದೆ. ಈ ಭಾಗದ ಧಾರ್ಮಿಕ ದೇವಾಲಯಗಳಲ್ಲಿ ವಿಶ್ವ ಪ್ರಸಿದ್ಧಿ ಹೊಂದಿರುವ ನಂದಿ ಯೋಗ ಮತ್ತು ಭೋಗ ನಂದೀಶ್ವರ ದೇವಾಲಯ ಇದೆ. ಯೋಗ ನಂದೀಶ್ವರ ನಂದಿ ಬೆಟ್ಟದಲ್ಲಿ ನೆಲೆಸಿದ್ದರೆ, ಭೋಗ ನಂದೀಶ್ವರ ಬೆಟ್ಟದ ತಪ್ಪಲು ನಂದಿ ಗ್ರಾಮದಲ್ಲಿ ನೆಲೆಸಿದ್ದಾನೆ.