ಚಿಕ್ಕಬಳ್ಳಾಪುರ: ಖಾಸಗಿ ಬಸ್ ಚಾಲಕ ಕುಡಿದು ವಾಹನ ಚಲಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಪ್ರಯಾಣಿಕರೇ ಬಸ್ ನಿಲ್ಲಿಸಿ, ಚಾಲಕನನ್ನು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಚಿನ್ನಸಂದ್ರ ಬಳಿ ನಡೆದಿದೆ.
ಚಿಂತಾಮಣಿ ನಗರದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಚಾಮುಂಡೇಶ್ವರಿ ಟ್ರಾವೆಲ್ಸ್ಗೆ ಸೇರಿದ ಬಸ್ ಚಾಲಕ ಅತೀ ವೇಗದಿಂದ ಬಸ್ ಚಲಾಯಿಸಿದ್ದು, ನಿಧಾನವಾಗಿ ವಾಹನವನ್ನು ಚಲಾಯಿಸುವಂತೆ ಬಸ್‌ನಲ್ಲಿದ್ದ ಪ್ರಯಾಣಿಕರು ಸೂಚಿಸಿದ್ದಾರೆ.
ಆದರೆ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದ ಚಾಲಕ ಅತಿ ವೇಗದಿಂದ ಬಸ್ ಚಲಾಯಿಸಿದ್ದು, ಈ ವೇಳೆ ಬಸ್‌ನಲ್ಲಿದ್ದ ಓರ್ವ ಮಹಿಳೆ ಕುಸಿದು ಬಿದ್ದಿದ್ದಾರೆ. ಕೋಪಗೊಂಡ ಪ್ರಯಾಣಿಕರು ಚಾಲಕ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿರುವುದಾಗಿ ಅವಮಾನಿಸಿ, ಚಿಂತಾಮಣಿ ನಗರದ ಹೊರವಲಯದಲ್ಲಿರುವ ಚಿನ್ನಸಂದ್ರ ಬಳಿ ಬಸ್ ತಡೆದು ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.