ಬಾಗೇಪಲ್ಲಿ:ಖಾಸಗಿ ಶಾಲಾ-ಕಾಲೇಜುಗಳ ಮಾದರಿಯಲ್ಲಿ ತಾಲೂಕಿನಲ್ಲಿ 11 ಅಂಗನವಾಡಿ ಕೇಂದ್ರಗಳು ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿದ್ದು, ಮಕ್ಕಳ ಕಲಿಕೆ ಸುಸಜ್ಜಿತವಾಗಿವೆ.
ತಾಲೂಕಿನಲ್ಲಿ ಮಂಜೂರಾದ 381 ಅಂಗನವಾಡಿ ಕೇಂದ್ರಗಳಲ್ಲಿ, 178 ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡ ಹೊಂದಿವೆ. ಉಳಿದಂತೆ ಗ್ರಾಮ ಪಂಚಾಯತ್ 14, ಸಮುದಾಯ ಕೇಂದ್ರಗಳಲ್ಲಿ 10, ಶಾಲೆಗಳಲ್ಲಿ 51, ನಗರ ವ್ಯಾಪ್ತಿಯಲ್ಲಿ ನಿವೇಶನ ರಹಿತ ಕೇಂದ್ರಗಳ ಬಾಡಿಗೆ ಕಟ್ಟಡಗಳು 25, ಗ್ರಾಮೀಣ ಭಾಗದಲ್ಲಿ 37 ಕೇಂದ್ರಗಳಲ್ಲಿ ನಿವೇಶನ ಇದೆ. 52 ಅಂಗನವಾಡಿ ಕೇಂದ್ರಗಳಿಗೆ ನಿವೇಶನಗಳು ಇಲ್ಲ. 14 ಅಂಗನವಾಡಿ ಕೇಂದ್ರಗಳ ಕಟ್ಟಡಗಳು ಪ್ರಗತಿ ಹಂತದಲ್ಲಿದೆ.
ಸುಸಜ್ಜಿತ ವ್ಯವಸ್ಥೆ ಹೊಂದಿರುವ ಅಂಗನವಾಡಿ ಕೇಂದ್ರಗಳು ತಾಲೂಕಿನಲ್ಲಿ 356 ಅಂಗನವಾಡಿ ಕೇಂದ್ರಗಳು, 25 ಮಿನಿ ಅಂಗನವಾಡಿ ಕೇಂದ್ರಗಳಿವೆ. ಸುಮಾರು 16,461 ಮಕ್ಕಳು ವಿವಿಧ ಕೇಂದ್ರಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ತಾಲೂಕಿನಾದ್ಯಂತ 381 ಅಂಗನವಾಡಿ ಕಾರ್ಯಕರ್ತೆಯರು, 356 ಮಂದಿ ಅಂಗನವಾಡಿ ಸಹಾಯಕಿಯರಿದ್ದಾರೆ.
ಹೊಸಕೋಟೆ ಎ, ಆದಿಗಾನಹಳ್ಳಿ, ದೇವರಗುಡಿಪಲ್ಲಿ ಎ, ಗೂಳೂರು 1, ಕಮ್ಮರವಾರಪಲ್ಲಿ, ಮಿಟ್ಟವಾಂಡ್ಲಪಲ್ಲಿ, ದುಗ್ಗಿನಾಯಕನಪಲ್ಲಿ, ಗುವ್ವಲವಾರಿಪಲ್ಲಿ ಅಂಗನವಾಡಿ ಕೇಂದ್ರಗಳು ಮಾದರಿಯಾಗಿವೆ. ಇದರಲ್ಲಿ ಸ್ವಂತ ಅಂಗನವಾಡಿ ಕಟ್ಟಡ, ವಿದ್ಯುತ್ ಸಂಪರ್ಕ, ಶೌಚಾಲಯಗಳು, ಕಾಂಪೌಂಡ್, ಕೈತೋಟ, ಸಮವಸ್ತ್ರ, ಶೂ, ಸಾಕ್ಸ್, ಕುರ್ಚಿಗಳು, ಒಳಾಂಗಣ, ಹೊರಾಂಗಣ, ನೆಲ ಕಲಾಕೃತಿಗಳು, ಬಾಲ ಗ್ರಂಥಾಲಯ ಇದೆ.
ಉಳಿದಂತೆ ಚಿನ್ನ ಒಬಯ್ಯಗಾರಿಪಲ್ಲಿ, ಮಾರ್ಗಾನುಕುಂಟೆ ಎಸ್‌ಟಿ ಕಾಲೊನಿ, ಶ್ರೀನಿವಾಸಪುರ, ಕಾರಕೂರು, ಕಾನಗಮಾಕಲಪಲ್ಲಿ, ಬಿಳ್ಳೂರು ಅಂಗನವಾಡಿ ಕೇಂದ್ರಗಳ ಕೆಲಸ ಪ್ರಗತಿಯಲ್ಲಿದೆ. ಒಂದು ತಿಂಗಳೊಳಗೆ ಆಕರ್ಷಕ ಮಾದರಿ ಅಂಗನವಾಡಿ ಕೇಂದ್ರಗಳಾಗಲಿವೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್.ಪಿ. ರಾಜೇಂದ್ರ ಪ್ರಸಾದ್ ತಿಳಿಸಿದರು.