ಚಿಕ್ಕಬಳ್ಳಾಪುರ:ವಿವಾಹಿತ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ಬುಧವಾರ ವರದಿಯಾಗಿದೆ. ಮೃತ ಮಹಿಳೆಯನ್ನು ಬಾಗೇಪಲ್ಲಿ ತಾಲೂಕಿನ ಚೇಳೂರು ಗ್ರಾಮದ ವರಲಕ್ಷ್ಮಿ (31) ಎಂದು ಗುರುತಿಸಲಾಗಿದೆ.
ವಿವರ:ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಚಿಂತಾಮಣಿ ತಾಲೂಕಿನ ಕೆ. ರಾಗಿಗುಟ್ಟಹಳ್ಳಿ ಗ್ರಾಮದ ನಿವಾಸಿ ವೆಂಕಟರಮಣ ಎಂಬಾತನಿಗೆ ವರಲಕ್ಷ್ಮಿಯನ್ನು ಕೊಟ್ಟು 2019ರಲ್ಲಿ ಮದುವೆ ಮಾಡಿಕೊಡಲಾಗಿತ್ತು. ಆದರೆ ಮದುವೆಯಾಗಿ ನಾಲ್ಕು ವರ್ಷವಾದರು ದಂಪತಿಗೆ ಮಕ್ಕಳಾಗಿಲ್ಲ ಹಾಗೂ ವರಲಕ್ಷ್ಮಿಗೆ ವರದಕ್ಷಿಣೆಯ ಹಿಂಸೆ ನೀಡಿದ್ದಲ್ಲದೆ ಆಕೆಗೆ ಶಿಕ್ಷಣವಿಲ್ಲ, ನನಗೆ ಬರುವ ಸಂಬಳ ಸಾಕಾಗುತ್ತಿಲ್ಲ ಎಂದು ಪತಿ ವೆಂಕಟರಮಣ ಸಾಕಷ್ಟು ಬಾರಿ ಕಿರುಕುಳ ನೀಡಿದ್ದಾನೆ ಎಂದು ಪೋಷಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪ ಮಾಡಿದ್ದಾರೆ.
ಇದೇ ವಿಚಾರವಾಗಿ ನಾಲ್ಕೈದು ಬಾರಿ ಪೊಲೀಸ್ ಠಾಣೆಯ ಮೆಟ್ಟಿಲೇರಿ ನ್ಯಾಯ ಪಂಚಾಯಿತಿಗಳು ನಡೆದಿವೆ. ವರಲಕ್ಷ್ಮಿ ಶವ ಅವರು ವಾಸಿಸುತ್ತಿದ್ದ ಪೊಲೀಸ್ ಕ್ವಾಟರ್ಸ್ ಮನೆಯಲ್ಲಿ ಪತ್ತೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿಯ ವಿವಿಧ ಸೆಕ್ಷನ್ಗಳಡಿ ದೂರು ದಾಖಲಾಗಿದೆ. ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿತ್ತು.
ಘಟನೆ ಕುರಿತು ಮೃತಮಹಿಳೆಯ ಸಹೋದರ ವೆಂಕಟೇಶ್ ಮಾತನಾಡಿ, 'ವೆಂಕಟರಮಣನಿಗೆ ಅವರ ಅಕ್ಕನ ಮಗಳನ್ನು ಮದುವೆಯಾಗಬೇಕೆಂಬ ಆಸೆ ಇತ್ತು. ಆದರೆ ವರಲಕ್ಷ್ಮಿ ಜೊತೆ ವಿವಾಹವಾಯಿತು. ಇದರಿಂದ ಆತ ಮತ್ತು ಆತನ ಅಕ್ಕ, ಅಪ್ಪ, ಅಮ್ಮ ವರಲಕ್ಷ್ಮಿಗೆ ಕಿರುಕುಳ ನೀಡುತ್ತಿದ್ದರು. ನಾವು ಮದುವೆ ಎಲ್ಲ ಮಾಡಿಕೊಟ್ಟು 200 ಗ್ರಾಂನಷ್ಟು ಒಡವೆ ಕೊಟ್ಟಿದ್ದೆವು. ಈಗ ಆ ಒಡವೆ ಅವಳ ಬಟ್ಟೆಗಳು ನಮ್ಮ ಮನೆಯಲ್ಲೇ ಇವೆ. ವೆಂಕಟರಮಣ ಕೇವಲ ನಾಲ್ಕು ಜೊತೆ ಬಟ್ಟೆ ಕೊಡಿಸಿದ್ದಾನೆ ಅಷ್ಟೆ. ನಾಲ್ಕು ವರ್ಷದಲ್ಲಿ ಒಂದು ವರ್ಷ ನಮ್ಮಲ್ಲೇ ಇದ್ದಳು. ಬಳಿಕ ನಾವು ಅವಳನ್ನು ಅವರ ಮನೆಗೆ ಬಿಟ್ಟು ಬಂದೆವು. ಆ ವೇಳೆ ನಮ್ಮ ಮೇಲೆ ಹಲ್ಲೆ ಮಾಡಿದ್ದಲ್ಲದೇ, ವರಲಕ್ಷ್ಮಿ ಸಾವನ್ನಪ್ಪಿದರೆ ನೀವೇ ಜವಾಬ್ದಾರಿ ಎಂದು ಪತ್ರ ಬರೆದು ಸಹಿ ಹಾಕುವಂತೆ ಹೇಳಿದ್ದರು. ಆದರೆ ನಾವು ಹಾಕಿರಲಿಲ್ಲ" ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಟ್ರಾನ್ಸ್ಫಾರ್ಮರ್ ಗೈ ವೈರ್ ಎಳೆದ ಚಿಂದಿ ಆಯುವ ಬಾಲಕ: ವಿದ್ಯುತ್ ಸ್ಪರ್ಶಕ್ಕೆ ಸಾವು