ಚಾಮರಾಜನಗರ:ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಸಮೂಹ ದೇವಾಲಯಗಳಲ್ಲಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ವೇಳೆ ಶಿಂಷಾ ಮಾರಮ್ಮನಿಗೆ ಭಕ್ತರು ಬರೆದಿರುವ ತರಹೇವಾರಿ ಬೇಡಿಕೆ ಪತ್ರಗಳು ಸಿಕ್ಕಿವೆ. ಮಹಿಳೆಯರು ತಮ್ಮ ಇಷ್ಟಾರ್ಥ ಈಡೇರಿಕೆಗಾಗಿ ಪತ್ರ ಬರೆದು ಹುಂಡಿಯಲ್ಲಿ ಹಾಕಿರುವ ಕೆಲವು ಪತ್ರಗಳು ಕಂಡು ಬಂದಿದ್ದರೆ, ಇನ್ನೂ, ಕೆಲವು ಪತ್ರಗಳಲ್ಲಿ ಉದ್ದದ ಪಟ್ಟಿಯನ್ನೇ ದೇವಿಗೆ ಭಕ್ತರು ಅರ್ಪಿಸಿದ್ದಾರೆ.
ಭಕ್ತೆಯೊಬ್ಬರು ತಮ್ಮ ಪತ್ರದಲ್ಲಿ 'ತಾಯಿ ನನ್ನವ್ವ ನನ್ನಿಂದ ಹಣ ಪಡೆದವರಿಂದ ಹಣ ಕೊಡಿಸು, ತಿಂಗಳಲ್ಲಿ ಅವರು ನನಗೆ ಹಣ ಹಿಂತಿರುಗಿಸುವಂತೆ ಬುದ್ಧಿ ಕೊಡು' ಎಂದು ಸಾಲಗಾರರ ಹೆಸರು ಬರೆದು ಹರಕೆ ಕಟ್ಟಿಕೊಂಡಿದ್ದಾರೆ. ಜೊತೆಗೆ ನನ್ನ ಹಣ ನನಗೆ ಕೊಡದಿದ್ದರೆ ಅವರಿಗೆ ಕಷ್ಟ ಕೊಡು ಎಂದು ಕೂಡ ಶಾಪ ಹಾಕಿರುವುದು ಪತ್ರದಲ್ಲಿದೆ.