ಚಾಮರಾಜನಗರ: ಸಚಿವ ವಿ.ಸೋಮಣ್ಣ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಚ್ಚರಿಯ ಅಭ್ಯರ್ಥಿಯಾಗುವುದರ ಜತೆಗೆ ಜಿಲ್ಲೆಯ ಮತದಾರರ ಪಟ್ಟಿಗೂ ಸೇರಿಕೊಂಡಿದ್ದಾರೆ. ಬೆಂಗಳೂರಿನ ವಿಜಯನಗರ ಕ್ಷೇತ್ರ ವ್ಯಾಪ್ತಿಯ ಮತದಾರರ ಪಟ್ಟಿಯಲ್ಲಿದ್ದ ಇವರು ಚಾಮರಾಜನಗರ ಅಭ್ಯರ್ಥಿಯಾದ ನಂತರ ಚಾಮರಾಜನಗರ ಮತದಾರರ ಪಟ್ಟಿಗೆ ತಮ್ಮ ಹೆಸರು ಹಾಗೂ ಪತ್ನಿ ಶೈಲಜಾ ಹೆಸರನ್ನೂ ಸೇರಿಸಿದ್ದಾರೆ.
ಚಾಮರಾಜನಗರದ ಶಂಕನಪುರ ಬಡಾವಣೆಯ ಮನೆ ವಿಳಾಸ ಕೊಟ್ಟಿದ್ದಾರೆ. ತಮ್ಮ ಪರವಾಗಿ ಮತ ಚಲಾಯಿಸಿಕೊಳ್ಳುವುದರೊಂದಿಗೆ 'ಹೊರಗಿನ ಅಭ್ಯರ್ಥಿ' ಎಂಬ ಮೂದಲಿಕೆಗೆ ಸೋಮಣ್ಣ ಠಕ್ಕರ್ ಕೊಟ್ಟಿದ್ದು, ಚಾಮರಾಜನಗರದಲ್ಲೇ ಇರುತ್ತೇನೆ ಎಂಬ ಸಂದೇಶ ರವಾನಿಸಿದ್ದಾರೆ. "ಚಾಮರಾಜನಗರ ಅಭ್ಯರ್ಥಿ ಆದ ಬಳಿಕ ಮತದಾರರ ಪಟ್ಟಿ ಪರಿಷ್ಕರಣೆಗೆ ಕಾಲವಕಾಶವಿದ್ದ ಹಿನ್ನೆಲೆಯಲ್ಲಿ ನಾನು ಹಾಗೂ ನನ್ನ ಶ್ರೀಮತಿ ಇಲ್ಲಿಗೆ ಮತದಾನವನ್ನು ವರ್ಗಾಯಿಸಿಕೊಂಡಿದ್ದೇನೆ. ನಾನಿದ್ದದ್ದು ವಿಜಯನಗರ, ಗೋವಿಂದರಾಜನಗರ ಹಾಗೂ ಬಿನ್ನಿಪೇಟೆ ಕ್ಷೇತ್ರ ಆಗಿತ್ತು. ನನ್ನ ಪರವಾಗಿ ನಾನು 3-4 ಬಾರಿಯಷ್ಟೇ ಮತ ಚಲಾಯಿಸಿಕೊಂಡಿರುವುದು. ಈ ಬಾರಿ ಚಾಮರಾಜನಗರದಲ್ಲಿ ಮತ ಚಲಾಯಿಸಿಸುತ್ತೇನೆ" ಎಂದು ತಿಳಿಸಿದರು.
'ಕಾಂಗ್ರೆಸ್ಗೆ ಮತ ಯಾವ ಪುರುಷಾರ್ಥಕ್ಕೆ?': ವರುಣ ಚುನಾವಣಾ ಅಖಾಡ ವರ್ಣರಂಜಿತವಾಗಿದೆ. ಪ್ರತಿ ಊರಿಗೂ ಭೇಟಿ ಕೊಟ್ಟಿದ್ದೇನೆ. ನಾನು ಗೆದ್ದ ಬಳಿಕ ಇಡೀ ಕ್ಷೇತ್ರವನ್ನೇ ಬದಲಿಸುತ್ತೇನೆ ಎಂದು ಸೋಮಣ್ಣ ಭರವಸೆ ನೀಡಿದರು. ಚಾಮರಾಜನಗರದಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಗೆ ಯಾವ ಪುರುಷಾರ್ಥಕ್ಕೆ ಮತ ಹಾಕಬೇಕು?, ಸಿದ್ದರಾಮಯ್ಯ ಹೆಜ್ಜೆ ಗುರುತುಗಳು ವರುಣ ಕ್ಷೇತ್ರದಲ್ಲಿ ಏನೂ ಇಲ್ಲ ಎಂದು ಹರಿಹಾಯ್ದರು.