ಚಾಮರಾಜನಗರ: ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥರು ಇದೇ ಮೊದಲ ಬಾರಿಗೆ ಚಾಮರಾಜನಗಕ್ಕೆ ಭೇಟಿ ನೀಡಿ, ವಿವಿಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿದರು.
ಆಮಿಷದ ಮತಾಂತರದ ವಿರುದ್ಧ ವಿದ್ಯಾವಲ್ಲಭ ಸ್ವಾಮೀಜಿ ಆಕ್ರೋಶ ನಗರದ ಚಾಮರಾಜೇಶ್ವರ ಸ್ವಾಮಿ, ಆಂಜನೇಯ, ಪಟ್ಟಾಭಿ ರಾಮಮಂದಿರ ಹಾಗೂ ಗುರು ರಾಘವೇಂದ್ರ ದೇವಾಲಯಕ್ಕೆ ಭೇಟಿಯಿತ್ತು, ಭಕ್ತಾಧಿಗಳಿಗೆ ಫಲಮಂತ್ರಾಕ್ಷತೆ ವಿತರಿಸಿ ಆಶೀರ್ವಚನ ನೀಡಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಮಿಷದ ಮತಾಂತರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ಸಲ್ಲದು. ಹಣ, ಮತ್ತಿತ್ತರ ಆಸೆ ತೋರಿಸಿ ಮತಾಂತರ ಮಾಡುವುದನ್ನು ನಾವು ಖಂಡಿಸುತ್ತೇವೆ. ಆಮಿಷಕ್ಕೆ ಒಳಗಾಗಿ ಮತಾಂತರಗೊಂಡವರಿಗೆ ಹಿಂದೂ ಧರ್ಮದ ಮಹತ್ವ ತಿಳಿಸಬೇಕು. ಧಾರ್ಮಿಕ ಮುಖಂಡರು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದರು.
ನಮ್ಮ ಧರ್ಮ, ಸಂಸ್ಕೃತಿಯಲ್ಲಿಯೇ ಬದುಕೋಣ:
ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ನಮ್ಮ ತನ ಕಳೆದುಕೊಳ್ಳುತ್ತಿರುವುದು ಹೆಚ್ಚಾಗಿದ್ದು, ಇದು ನಿಲ್ಲಬೇಕು. ಜಾತಿ, ಮತದ ಬೇಧವಿಲ್ಲದೇ ಸರ್ವರೂ ಸುಖಿಗಳಾಗಲಿ ಎಂದು ಹಾರೈಸುವುದು ಹಿಂದೂ ಧರ್ಮ ಮಾತ್ರ. ಶಾಸ್ತ್ರ, ಧಾರ್ಮಿಕ ಚಟುವಟಿಕೆ ಮೂಲಕ ನಮ್ಮ ಧರ್ಮ, ಸಂಸ್ಕೃತಿಯಲ್ಲಿಯೇ ಬದುಕೋಣ ಎಂದು ಸ್ವಾಮೀಜಿ ಹೇಳಿದರು.
ಕೊರೊನಾ ಮಾಹಾಮಾರಿ ಜಗತ್ತಿನಾದ್ಯಂತ ಅವಾಂತರ ಸೃಷ್ಟಿ ಮಾಡಿದ್ದು, ಈ ಸೋಂಕು ಸಂಪೂರ್ಣ ನಾಶವಾಗಲೆಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸೋಣ. ಎಲ್ಲರೂ ನೆಮ್ಮದಿಯಿಂದ ಇರಲೆಂದು ಭಗವಂತನಲ್ಲಿ ಕೇಳಿಕೊಳ್ಳೋಣ ಎಂದು ಸ್ವಾಮೀಜಿ ಇದೇ ವೇಳೆ ಹಾರೈಸಿದರು.
ಇದನ್ನೂ ಓದಿ:ಚಾಮರಾಜನಗರ: ನಟ ವಿಜಯ್ ರಾಘವೇಂದ್ರರಿಂದ ರಕ್ತದಾನ.. ನೇತ್ರದಾನ ಮಾಡಲು ಕರೆ