ಕರ್ನಾಟಕ

karnataka

ಹಸಿರಿನ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕುತ್ತಿದೆ ಭರಚುಕ್ಕಿ: ತುತ್ತ ತುದಿಗೆ ಹೋಗಲು ಪ್ರವಾಸಿಗರ ದುಸ್ಸಾಹಸ!

By

Published : Jul 28, 2019, 10:44 PM IST

ಚಾಮರಾಜನಗರದ ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ಜಲಪಾತದ ಮೇಲಕ್ಕೆ ಸೆಲ್ಫಿ ತೆಗೆದುಕೊಳ್ಳಲು ಪ್ರವಾಸಿಗರು ಸೋಲಾರ್​ ಬೇಲಿ ದಾಟಿ ಹೋಗುತ್ತಿದ್ದಾರೆ. ಆದ್ರೆ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.

ಭರಚುಕ್ಕಿ ಜಲಪಾತ

ಚಾಮರಾಜನಗರ:ಅಬ್ಬಾಬ್ಬ... ಧುಮ್ಮಿಕ್ಕುವ ಜಲಧಾರೆ, ಅರೇ ಇದ್ಯಾವುದಪ್ಪಾ ಇಂತಹ ಸುಂದರ ತಾಣ​ ಅಂತೀರಾ? ಇದು ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ.

ಹೌದು, ಈ ಸುಂದರ ಸ್ಥಳಕ್ಕೆ ಬರುವ ಪ್ರವಾಸಿಗರು ತುತ್ತ ತುದಿಗೆ ಹೋಗುವ ದುಸ್ಸಾಹಸವನ್ನು ಮಾಡುತ್ತಿದ್ದು, ಒಂದು ಪಕ್ಷ ಅವರು ಆಯ ತಪ್ಪಿದರೆ ಪ್ರಪಾತಕ್ಕೆ ಬೀಳುವುದಂತೂ ಖಂಡಿತ.

ಅರಣ್ಯ ಇಲಾಖೆ ಸೋಲಾರ್ ಬೇಲಿ ಅಳವಡಿಸಿದ್ದರೂ ಕ್ಯಾರೇ ಎನ್ನದ ಯುವಕರು ಸೋಲಾರ್ ಬೇಲಿ ದಾಟಿ ಜಲಪಾತದ ಮೇಲಕ್ಕೆ ಸೆಲ್ಫಿ ತೆಗೆದುಕೊಳ್ಳಲು ಹೋಗುತ್ತಿದ್ದಾರೆ. ಇನ್ನು ಸಮೀಪದಲ್ಲೇ ಶಿಂಷಾ ಮಾರಮ್ಮನ‌ ದೇಗುಲವಿದ್ದು, ಇಲ್ಲಿಗೆ ಬರುವ ಭಕ್ತಾದಿಗಳು ಮತ್ತು ಯುವಕರು ಸೇತುವೆ ಮೂಲಕ ಸೋಲಾರ್ ಬೇಲಿ ದಾಟಿ ಈ ದುಸ್ಸಾಹಸ ಮಾಡುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಭರಚುಕ್ಕಿ ಜಲಪಾತ

ಕಳೆಗಟ್ಟಿದ ಭರಚುಕ್ಕಿ:

ಬರದಿಂದ ಭಣಗುಡುತ್ತಿದ್ದ ಭರಚುಕ್ಕಿ ಜಲಪಾತಕ್ಕೆ ನೀರಿನ ಹರಿವು ಹೆಚ್ಚಾಗುತ್ತಿದ್ದಂತೆ ಪ್ರವಾಸಿಗರ ದಂಡು ಲಗ್ಗೆ ಹಾಕುತ್ತಿದೆ. ವೀಕೆಂಡ್ ಮೋಜು- ಫ್ಯಾಮಿಲಿ ಪಿಕ್​​ನಿಕ್​​ಗೆ ಹೇಳಿ ಮಾಡಿಸಿದಂತಿರುವ ಭರಚುಕ್ಕಿ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಿದ್ದು, ಜಲಧಾರೆಯ ವೈಯ್ಯಾರಕ್ಕೆ ಸಾಟಿಯೇ ಇಲ್ಲದಂತಾಗಿದೆ. ಕಳೆದ 2 ತಿಂಗಳಿನಿಂದ ಕ್ಷೀಣವಾಗಿದ್ದ ಪ್ರವಾಸಿಗರ ಸಂಖ್ಯೆ ಏರುಗತಿ ಕಾಣುತ್ತಿದ್ದು, ಪ್ರವಾಸಿಗರನ್ನೇ ನೆಚ್ಚಿಕೊಂಡಿದ್ದ ಹಲವು ಕುಟುಂಬಗಳು ಈಗ ನಿಟ್ಟುಸಿರು ಬಿಟ್ಟಿವೆ.

ಮೂಲ ಸೌಕರ್ಯ ಕೊರತೆ:

ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾದರೂ ಮೂಲ ಸೌಕರ್ಯ ಒದಗಿಸಲು ಪ್ರವಾಸೋದ್ಯಮ ಇಲಾಖೆ ಸೋತಿದ್ದು, ಸೂಕ್ತ ಶೌಚಾಲಯ, ಉತ್ತಮ ಹೋಟೆಲ್​​ಗಳು, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಪ್ರವಾಸಿಗರು ಪರದಾಡುವಂತ ಪರಿಸ್ಥಿತಿ ಇದೆ.

ABOUT THE AUTHOR

...view details