ಚಾಮರಾಜನಗರ: ದೇವರು ಇರುವುದನ್ನು ಕೊರೊನಾ ಮಹಾಮಾರಿ ಸಾಬೀತು ಮಾಡಿದೆ. ಭಗವಂತ ಕಾಣುವುದಿಲ್ಲ, ಇಲ್ಲ ಎನ್ನುತ್ತಿದ್ದವರಿಗೆ ಕೊರೊನಾ ಉತ್ತರ ನೀಡಿದೆ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಚಾಮರಾಜನಗರ ತಾಲೂಕಿನ ಬಂದೀಗೌಡನಹಳ್ಳಿಯಲ್ಲಿ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ಭಗವಂತನನ್ನು ಪ್ರಶ್ನೆ ಮಾಡುವವರಿಗೆ ದೇವರು ಇದ್ದಾನೆ ಎಂದು ತೋರಿಸಲು ಕೊರೊನಾ ಸಾಕ್ಷಿಯಾಗಿದೆ. ಯಾರಿಗೂ ಕಾಣದಿರುವ ವೈರಸ್ ಇಡೀ ಜಗತ್ತನ್ನು ತಲ್ಲಣ ಗೊಳಿಸಿದೆ. ಒಂದು ಸಾಮಾನ್ಯ ವೈರಸ್ ಇಷ್ಟೆಲ್ಲಾ ಕೆಲಸ ಮಾಡುವುದಾದರೆ ಜಗತ್ತನ್ನು ಸೃಷ್ಟಿಸುವ, ನಿಯಂತ್ರಿಸುವ ಭಗವಂತನ ಶಕ್ತಿ ಎಷ್ಟು ಅದ್ಭುತ ಎಂಬುದು ಅರ್ಥವಾಗುತ್ತದೆ ಎಂದರು.
ಬಂದೀಗೌಡನಹಳ್ಳಿಯಲ್ಲಿ ಆಹಾರ ಕಿಟ್ ವಿತರಿಸಿ ಮಾತನಾಡಿದ ಸುತ್ತೂರು ಶ್ರೀ ಬಸವಣ್ಣ ದೇವರನ್ನು ಅಗೋಚರ, ಅಪ್ರತಿಮ ಹಾಗೂ ಯಾವುದಕ್ಕೂ ಸಿಗದಿರುವ ವಸ್ತು ಎಂದು ಹೇಳಿದ್ದರು. ಅದೇ ರೀತಿ ಕಣ್ಣಿಗೆ ಕಾಣದ ಕೊರೊನಾ ಮಹಾಮಾರಿ ಇಡೀ ಜಗತ್ತನ್ನು ತಲ್ಲಣಿಸಿದೆ. ಇಂತಹದೊಂದು ಮಾರಿ ಬಂದರೆ ಹೇಗಿರುತ್ತದೆ ಎಂಬುದು ಈಗಾಗಲೇ ಸ್ವಅನುಭವಕ್ಕೆ ಬಂದಿದೆ. ರೋಗ ಬಂದರೆ ಎಚ್ಚರಿಕೆಯಿಂದ ಇರಬೇಕು ಎಂದು ಈಗ ಎಲ್ಲರಿಗೂ ಗೊತ್ತಾಗಿದೆ ಎಂದು ಹೇಳಿದರು.
ಎರಡನೇ ಅಲೆ ಸಂದರ್ಭದಲ್ಲಿ ಎಚ್ಚೆತ್ತುಕೊಳ್ಳದ ಕಾರಣ ವಿಪರೀತ ಸಾವು ನೋವು ಸಂಭವಿತು. ಮೂರನೇ ಅಲೆ ಬರಲಿದೆ ಎಂದು ಹೇಳಲಾಗುತ್ತಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಜನರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು. ಮೈಸೂರು ನಾಗರಿಕ ವೇದಿಕೆಯು ಭೂಕಂಪ, ಸುನಾಮಿ, ಭೂಕುಸಿತದಂತಹ ಸಂಕಷ್ಟದ ಸಂದರ್ಭದಲ್ಲಿ ನೆರವಿನ ಹಸ್ತ ಚಾಚಿದೆ. ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೂ ಮನೆ ನಿರ್ಮಿಸಿಕೊಟ್ಟಿದೆ. ಕೋವಿಡ್ ನಿಂದ ಸಂಕಷ್ಟಕ್ಕೆ ಸಿಲುಕಿದ ಜನರಿಗೂ ದಿನಸಿ ಕಿಟ್ ನೀಡುವ ಮೂಲಕ ಜನರಿಗೆ ಸ್ಪಂದಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ 621 ಅಂಕಗಳನ್ನು ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ ಅಟ್ಟುಗುಳಿಪುರ ಗ್ರಾಮದ ಜೆಎಸ್‍ಎಸ್ ಪ್ರೌಢಶಾಲೆಯ ವಿದ್ಯಾರ್ಥಿನಿ ನಂದಿನಿಯನ್ನು ಅಭಿನಂದಿಸಿದ ಶ್ರೀಗಳು, ನಂದಿನಿ ಮುಂದಿನ ಪಿಯುಸಿ ಶಿಕ್ಷಣವನ್ನು ನಮ್ಮ ಸಂಸ್ಥೆಯಲ್ಲೇ ಮುಂದುವರೆಸಿದರೆ ಶುಲ್ಕವನ್ನು ಪಾವತಿಸಬೇಕಿಲ್ಲ ಎಂದು ಘೋಷಿಸಿದರು.