ಚಾಮರಾಜನಗರ: ಇಲ್ಲಿನ ಠಾಣೆಯ ಸಬ್ಇನ್ಸ್ ಪೆಕ್ಟರ್ ಟಿ.ಎ. ತಾಜುದ್ದೀನ್ ಎಂಬುವರು ಸಶಕ್ತ ಸಮಾಜದ ನಿರ್ಮಾಣ ಮಾಡಲು ಪೊಲೀಸರಿಂದ ಮಾತ್ರ ಸಾಧ್ಯ ಎಂದು ನಂಬಿ 8 ಸರ್ಕಾರಿ ನೌಕರಿ ಬಳಿಕ ಪೊಲೀಸ್ ಅಧಿಕಾರಿಯಾಗಿ ಕೊರೊನಾ ವಿರುದ್ಧ ಹೋರಾಡುತ್ತಿದ್ದಾರೆ.
ಶೇಂಗಾ ಮಾರುತ್ತಿದ್ದ ಹುಡುಗನೀಗ ಕೊರೊನಾ ವಾರಿಯರ್ ಮೂಲತಃ ಕೊಡಗು ಜಿಲ್ಲೆಯ ಕುಟ್ಟಾ ಗ್ರಾಮದ ತಾಜುದ್ದೀನ್ 18 ವರ್ಷ 6 ತಿಂಗಳಿಗೆ ಅಂದರೆ 2008 ರಲ್ಲಿ ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಸರ್ಕಾರಿ ಸೇವೆ ಆರಂಭಿಸಿ ಬಳಿಕ 2011 ರಲ್ಲಿ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಆಯ್ಕೆಯಾಗಿದ್ದರು. ಬಳಿಕ, 2014 ರಲ್ಲಿ ಚಿಕ್ಕಬಳ್ಳಾಪುರ ಪಂಚಾಯತ್ ರಾಜ್ ಇಲಾಖೆಯಲ್ಲಿ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿ ಆಯ್ಕೆ, 2015 ರಲ್ಲಿ ವಕ್ಫ್ ಮಂಡಳಿಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಆಯ್ಕೆ, 2016 ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪಿಡಿಒ ಆಗಿ ಆಯ್ಕೆ, 2016-17ರಲ್ಲಿ ಕೊಡಗಿನ ಪಂಚಾಯತ್ ರಾಜ್ ಇಲಾಖೆಯಲ್ಲಿ ಗ್ರೇಡ್-1 ಕಾರ್ಯದರ್ಶಿ, 2016-17 ರಲ್ಲೇ ಜಿಲ್ಲಾ ಸಹಾಯಕ ಉದ್ಯೋಗಾಧಿಕಾರಿ, ತದನಂತರ ಸ್ಥಳೀಯ ಸಂಸ್ಥೆಯಲ್ಲಿ ರಾಜಸ್ವ ನಿರೀಕ್ಷರಾಗಿ ಆಯ್ಕೆಯಾಗಿದ್ದ ತಾಜುದ್ದೀನ್ ಈಗ ಚಾಮರಾಜನಗರ ಪಟ್ಟಣ ಠಾಣೆಯ ಪಿಎಸ್ಐ ಆಗಿ ಕೋವಿಡ್-19 ಮುನ್ನೆಚ್ಚರಿಕೆ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ಕೊರೊನಾ ವಾರಿಯರ್ ಆಗಿದ್ದಾರೆ.
ಮಹಮ್ಮದ್ ಹಾಗೂ ಅಮೀನಾ ದಂಪತಿಗೆ ಐವರು ಮಕ್ಕಳಿದ್ದು, ಮೂವರು ಸಹೋದರರು ಸ್ವ ಉದ್ಯೋಗ ಮಾಡುತ್ತಿದ್ದು, ಸಹೋದರಿಗೆ ವಿವಾಹವಾಗಿದೆ. ಕಡುಬಡತನದಲ್ಲೇ ಬೆಳೆದ ತಾಜುದ್ದೀನ್ ಚಿಕ್ಕಂದಿನಲ್ಲಿ ಶೇಂಗಾ ಮಾರಿ ಪೆನ್ನು-ಪುಸ್ತಕ ಕೊಳ್ಳುತ್ತಿದ್ದರು. ಬಳಿಕ, ಪಿಯು ಮಾಡಲು ಬಾಳೆ ಎಲೆ ಮಾರಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ಬಳಿಕ ಕೆಎಸ್ಒಯುನಲ್ಲಿ ಪದವಿ ಪಡೆದಿದ್ದಾರೆ. ಇವರು ಪಡೆದ 8 ಸರ್ಕಾರಿ ನೌಕರಿಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯ ಪಿಡಿಒ ನೇಮಕಾತಿಯಲ್ಲಿ 5ನೇ ರ್ಯಾಂಕ್, ಕೊಡಗು ಜಿಲ್ಲೆಯ ಪಂಚಾಯತ್ ರಾಜ್ ಇಲಾಖೆಯಲ್ಲಿ ಪ್ರಥಮ ದರ್ಜೆ ಕಾರ್ಯದರ್ಶಿ ಹುದ್ದೆಯಲ್ಲಿ ಮೊದಲನೇ ರ್ಯಾಂಕ್, ಸಹಾಯಕ ಉದ್ಯೋಗಾಧಿಕಾರಿ ನೇಮಕಾತಿಯಲ್ಲಿ 14 ನೇ ರ್ಯಾಂಕ್ ಪಡೆದಿರುವುದು ಇವರ ಮತ್ತೊಂದು ಸಾಧನೆ.
ಅವರ ಕುಟುಂಬದಲ್ಲಿ ಸರ್ಕಾರಿ ನೌಕರಿ ಹಿಡಿದ ಏಕೈಕ ವ್ಯಕ್ತಿ ಇವರಾಗಿದ್ದು ಪ್ರೊಬೆಷನರಿ ಪಿಎಸ್ಐ ಆಗಿ ಯಳಂದೂರು, ಚಾಮರಾಜನಗರ ಪೂರ್ವ ಠಾಣೆಯಲ್ಲಿ ದಕ್ಷತೆ, ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಿ ಒಳ್ಳೆಯ ಹೆಸರನ್ನೂ ಗಳಿಸಿದ್ದು, ಕಡ್ಲೆಕಾಯಿ ಮಾರುತ್ತಿದ್ದ ಹುಡುಗ ತನ್ನ ಪರಿಶ್ರಮದಿಂದ ಉನ್ನತ ಹುದ್ದೆ ಸಂಪಾದಿಸಿ ಕೊರೊನಾ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವುದು ನಿಜಕ್ಕೂ ಯುವಕರಿಗೆ ಮಾದರಿ ಆಗಿದೆ.