ಚಾಮರಾಜನಗರ: ನಾಡಿನ ಪ್ರಮುಖ ಶಿವ ದೇವಾಲಯಗಳಲ್ಲೊಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾ ಶಿವರಾತ್ರಿ ಸಡಗರ ಆರಂಭವಾಗಿದ್ದು, 5 ದಿನಗಳ ಕಾಲ ಅದ್ಧೂರಿಯಾಗಿ ಜಾತ್ರೆ ನಡೆಯಲಿದೆ.
ಮಲೆಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಸಂಭ್ರಮ ರಾಜ್ಯದ ವಿವಿಧ ಭಾಗಗಳಿಂದ ಭಕ್ತಸಾಗರವೇ ಬೆಟ್ಟಕ್ಕೆ ಹರಿದು ಬರುತ್ತಿದ್ದು, ಮಹಾ ಶಿವರಾತ್ರಿ ಪ್ರಯುಕ್ತ ಮಾದಪ್ಪನಿಗೆ ಬೆಳಗ್ಗೆಯಿಂದ ರುದ್ರಾಭಿಷೇಕ, ಕ್ಷೀರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ವಿಶೇಷ ಪೂಜೆ ನಡೆದಿದೆ.
ದೇಗುಲವನ್ನ ವಿಶೇಷವಾಗಿ ವಿವಿಧ ಪುಷ್ಪಗಳಿಂದ ಅಲಂಕೃತಗೊಳಿಸಲಾಗಿದೆ. ದೇಗುಲದ ಒಳಾಂಗಣದಲ್ಲಿ ಗರ್ಭಗುಡಿ ಸೇರಿದಂತೆ ಹೊರ ಭಾಗದಲ್ಲಿ ವಿವಿಧ ರೀತಿಯ ಹಣ್ಣು, ತರಕಾರಿ ಹಾಗೂ ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಲಾಗಿದ್ದು, ಭಕ್ತರನ್ನು ಆಕರ್ಷಿಸುತ್ತಿದೆ.
ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಲಕ್ಷಾಂತರ ಭಕ್ತರಿಗಾಗಿ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಸಕಲ ವ್ಯವಸ್ಥೆಗಳನ್ನ ಮಾಡಿದ್ದು, ನಿರಂತರ ದಾಸೋಹ ನಡೆಯುತ್ತಿದೆ. ಪ್ರತಿದಿನ 8ಕ್ಕೂ ಹೆಚ್ಚು ಕ್ವಿಂಟಾಲ್ ಅಕ್ಕಿ ದಾಸೋಹಕ್ಕೆ ಬಳಕೆಯಾಗುತ್ತಿದೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜೈವಿಭವಸ್ವಾಮಿ ತಿಳಿಸಿದ್ದಾರೆ. ಅಲ್ಲದೇ ಇಂದು ರಂಗಮಂದಿರದ ಹೊಸ ವೇದಿಕೆಯಲ್ಲಿ "ಶ್ರೀ ಮಲೆಮಹದೇಶ್ವರ ಸ್ವಾಮಿ ಜಾನಪದ ಉತ್ಸವ" ನಡೆಯಲಿದೆ.
ಶಿವ ದೇಗುಲಗಳಲ್ಲಿ ವಿಶೇಷ ಪೂಜೆ: ಜಿಲ್ಲೆಯ ಶಿವನ ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಅಭಿಷೇಕ, ಬಿಲ್ವಾರ್ಚನೆ ನಡೆಯುತ್ತಿದ್ದು, ಗ್ರಾಮೀಣ ಭಾಗದ ದೇವಾಲಯಗಳಲ್ಲಿ ರಾತ್ರಿ ಜಾಗರಣೆ ನಡೆಸಲು ತಯಾರಿ ನಡೆಸಲಾಗುತ್ತಿದೆ.