ಚಾಮರಾಜನಗರ: ಪೌರ ಕಾರ್ಮಿಕ ಮಹಿಳೆಯೊಬ್ಬರು ಸಮುದಾಯ ಶೌಚಾಲಯದ ಸ್ವಚ್ಛತೆ ಕಾಪಾಡುವ ಸಲುವಾಗಿ ಹಾಗೂ ಕೌಟುಂಬಿಕ ಕಾರಣಗಳಿಂದ ಮನೆಯನ್ನು ತೊರೆದು ಶೌಚಾಲಯದಲ್ಲಿ ವಾಸವಾಗಿರುವ ಘಟನೆ ನಗರದಲ್ಲಿ ನಡೆದಿದೆ.
ಪಬ್ಲಿಕ್ ಟಾಯ್ಲೆಟ್ನಲ್ಲಿ ವಾಸವಾಗಿರುವ ಶಾಂತಮ್ಮ ನಗರಸಭೆಯ ನೌಕರರಾಗಿರುವ ಶಾಂತಮ್ಮ ಎಂಬುವರು ಕಳೆದ 18 ವರ್ಷಗಳಿಂದ ನಗರದ ಸಂತೇಮರಹಳ್ಳಿ ರಸ್ತೆಯಲ್ಲಿರುವ ಉಪ್ಪಾರ ಸಮುದಾಯದ ಮಹಿಳಾ ಶೌಚಾಲಯದಲ್ಲಿ ಪತಿಯೊಂದಿಗೆ ವಾಸವಾಗಿದ್ದಾರೆ. ಶಾಂತಮ್ಮ ದಂಪತಿಗೆ ಒಬ್ಬ ಪುತ್ರಿ ಹಾಗೂ ಪುತ್ರನಿದ್ದು, ಅವರು ಕೂಡ ಸ್ವಚ್ಛತಾ ಕಾರ್ಮಿಕರು. ಅವರ ಇಬ್ಬರೂ ಮಕ್ಕಳು ನಗರದಲ್ಲಿ ಬಾಬು ಜಗಜೀವನರಾಂ ಬಡಾವಣೆಯಲ್ಲಿ ವಾಸವಾಗಿದ್ದಾರೆ.
ಮುಂಜಾನೆ ಹಾಗೂ ಸಂಜೆ ವೇಳೆಯಲ್ಲಿ ಇಲ್ಲಿನ ಉಪ್ಪಾರ ಸಮುದಾಯದ ಮಹಿಳೆಯರು ಬಯಲು ಬಹಿರ್ದೆಸೆಗೆ ಹೋಗುವುದನ್ನು ತಪ್ಪಿಸುವ ಸಲುವಾಗಿ ಶಾಂತಮ್ಮ ಅವರು ಶೌಚಾಲಯದಲ್ಲಿ ವಾಸವಾಗಿದ್ದಾರೆ. ಅಲ್ಲೇ ಉಳಿದು ಶೌಚಾಲಯವನ್ನು ಮನೆಯಂತೆ ಸ್ವಚ್ಛವಾಗಿಟ್ಟುಕೊಂಡಿದ್ದಾರೆ. 2005–06ರಲ್ಲಿ ನಿರ್ಮಲ ಭಾರತ ಯೋಜನೆಯಡಿ ನಿರ್ಮಿಸಲಾದ ಮಹಿಳಾ ಶೌಚಾಲಯದ ಮುಂಭಾಗ ಇರುವ ಚರಂಡಿಯ ಮೇಲೆ ಅಡುಗೆ ಮಾಡಿಕೊಳ್ಳುತ್ತಾರೆ.
ಅಲ್ಲೇ ಮತ್ತೊಂದು ಒಲೆ ಇಟ್ಟು ಸ್ನಾನಕ್ಕಾಗಿ ನೀರು ಕಾಯಿಸಿಕೊಳ್ಳುತ್ತಾರೆ. ಶೌಚಾಲಯದಲ್ಲಿ ಸ್ವಚ್ಛತಾ ವಸ್ತುಗಳನ್ನು ಇಟ್ಟುಕೊಳ್ಳಲು ನಿರ್ಮಿಸಿರುವ ಕೋಣೆಯಲ್ಲಿ ಉಪಹಾರ ಸೇವಿಸಿ ಅಲ್ಲಿಯೇ ಮಲಗುತ್ತಿದ್ದಾರೆ.ನಗರದ ಬೇರೊಂದು ಬಡಾವಣೆಯಿಂದ ಬರುವುದರೊಳಗೆ ಇಲ್ಲಿನ ಮಹಿಳೆಯರು ಚಾಮರಾಜನಗರ–ಸಂತೇಮರಹಳ್ಳಿ ಮುಖ್ಯರಸ್ತೆಯಲ್ಲೇ ಮಲಮೂತ್ರ ವಿಸರ್ಜನೆಗೆ ಕೂರುತ್ತಾರೆ. ಇದರಿಂದ ಬಡಾವಣೆಯು ದುರ್ವಾಸನೆಯಿಂದ ಕೂಡಿರುತ್ತಿತ್ತು. ಇದನ್ನು ತಪ್ಪಿಸುವ ಸಲುವಾಗಿ ಶಾಂತಮ್ಮ ಅವರು ಶೌಚಾಲಯದಲ್ಲೇ ಉಳಿದುಕೊಂಡು ಸ್ವಚ್ಛತೆಯಲ್ಲಿ ತೊಡಗಿದ್ದಾರೆ ಎಂದು ತಿಳಿದುಬಂದಿದೆ.
ಸಾರ್ವಜನಿಕ ಶೌಚಾಲಯದಲ್ಲಿ ಮಹಿಳೆ ವಾಸ ಈ ಕುರಿತು ನಗರಸಭೆ ಆಯುಕ್ತ ರಾಜಣ್ಣ ಪ್ರತಿಕ್ರಿಯಿಸಿ, ಪೌರಕಾರ್ಮಿಕ ಮಹಿಳೆ ಶೌಚಾಲಯದಲ್ಲಿ ವಾಸವಾಗಿರುವುದು ಗಮನಕ್ಕೆ ಬಂದಿದೆ. ಕೌಟುಂಬಿಕ ಸಮಸ್ಯೆಯಿಂದ ಮಹಿಳೆಯ ಶೌಚಾಲಯದಲ್ಲಿ ಉಳಿದುಕೊಂಡಿದ್ದಾರೆ. ಅವರಿಗೆ ಶೌಚಾಲಯದಲ್ಲಿ ವಾಸ ಮಾಡದಂತೆ ತಿಳಿಹೇಳಿದ್ದೇವೆ. ಆದರೂ ಕೇಳುತ್ತಿಲ್ಲ. ಶಾಂತಮ್ಮ ಸೇರಿದಂತೆ ಇತರೆ ಪೌರಕಾರ್ಮಿಕರಿಗೆ ಪ್ರತಿ ತಿಂಗಳು ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಪೌರಕಾರ್ಮಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗುತ್ತಿದೆ ಎಂದರು.