ಚಾಮರಾಜನಗರ: ಬಿಜೆಪಿ ಅಂದ್ರೆ ಬೆಂಕಿ ಜಗಳ ಪಾರ್ಟಿ, ಬೆಂಕಿ ಪೊಟ್ಟಣದಂತೆ ಅವರು ಕೆಲಸ ಮಾಡಲಿದ್ದು, ಜಗಳ ಹತ್ತಿಸಿ ಅಧಿಕಾರ ಅನುಭವಿಸುತ್ತಾರೆ ಎಂದು ಶಾಸಕ ರಿಜ್ವಾನ್ ಅರ್ಷದ್ ಹೇಳಿದರು.
ನಗರದಲ್ಲಿ ಆಯೋಜಿಸಿದ್ದ ಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂವಿಧಾನ ಆಶಯದಂತೆ ಕಾಂಗ್ರೆಸ್ ಎಲ್ಲರನ್ನೂ ಭಾರತೀಯರು ಎಂದು ನೋಡುತ್ತದೆ. ಆದರೆ, ಬಿಜೆಪಿಯು ಧರ್ಮ-ಜಾತಿ ಗುರುತಿಸಿ ಹೊಡೆಯಿರಿ, ಕಡಿಯಿರಿ ಎಂದು ಹೇಳುತ್ತದೆ. ಬಿಜೆಪಿ ಎಂದರೆ ಬೆಂಕಿ ಜಗಳ ಪಾರ್ಟಿ, ಬಡವರ ಮನೆ ಸುಡುವುದು ವಿಧಾನಸಭೆಯಲ್ಲಿ ಆಡಳಿತ ನಡೆಸುವುದೇ ಅವರ ಅಜೆಂಡಾ ಎಂದು ಕಿಡಿಕಾರಿದರು.
ಈ ದೇಶದ ಇತಿಹಾಸದಲ್ಲೇ ಶೇ 40ರಷ್ಟು ಕಮಿಷನ್ ಹೊಡೆಯುತ್ತಿರುವ ಸರ್ಕಾರ ಇದು. ಗುತ್ತಿಗೆದಾರರು ಪತ್ರ ಬರೆದರೆ ಮೋದಿ ತಿರುಗಿಯೂ ನೋಡುತ್ತಿಲ್ಲ. ಇದರಿಂದ ಗೊತ್ತಾಗಲಿದೆ ಅವರಿಗೂ ಶೇ 25ರಷ್ಟು ಹೋಗುತ್ತಿರುವುದರಿಂದ ಇಲ್ಲಿನವರಿಗೆ ಪ್ರಧಾನಿ ಯಾವುದೇ ಕಡಿವಾಣ ಹಾಕಿಲ್ಲ ಎಂದು ಆರೋಪಿಸಿದರು.
ನಾವು ಏನು ಊಟ ಮಾಡಬೇಕು, ಯಾವ ಬಟ್ಟೆ ಹಾಕೋಬೇಕು, ಯಾವ ಭಾಷೆ ಮಾತನಾಡಬೇಕು ಎಂಬುದನ್ನು ಬಿಜೆಪಿಯವರನ್ನು ಕೇಳಿಕೊಂಡು ಮಾಡಬೇಕಿದೆ. ಕೊನೆಗೆ ನಾವು ಯಾರನ್ನು ಪ್ರೀತಿಸಬೇಕೆಂಬುದನ್ನು ಅವರನ್ನೇ ಕೇಳಬೇಕಿದೆ. ಪ್ರೀತಿಸಲು ಬಿಜೆಪಿಯವರಿಗೆ ಅರ್ಜಿ ಹಾಕಬೇಕು, ಇಲ್ಲದಿದ್ದರೇ ಖಡ್ಗ, ತ್ರಿಶೂಲ ಹಿಡಿದು ಬರುತ್ತಾರೆ. ನಮ್ಮ ಓಟು ಹಾಕಿ ಇವರನ್ನೇ ಎಲ್ಲದಕ್ಕೂ ಕೇಳಬೇಕಾದ ಗ್ರಹಚಾರ ಬಂದಿದೆ ಎಂದು ವಾಗ್ದಾಳಿ ನಡೆಸಿದರು.
ಪ್ರತಾಪ್ ಸಿಂಹ ಪೇಪರ್ ಸಿಂಹ: ಕಾಂಗ್ರೆಸ್ ನಾಯಕರಿಂದ ಯಾವಾಗಲೂ ಸಮಾಜವನ್ನು ಒಗ್ಗೂಡಿಸುವ ಮಾತುಗಳನ್ನು ಕೇಳಿರುತ್ತೀರಿ. ಸಾಮರಸ್ಯದ ಹೇಳಿಕೆಗಳನ್ನು ಓದಿರುತ್ತೀರಿ. ಆದರೆ, ಪಕ್ಕದ ಜಿಲ್ಲೆಯಾದ ಮೈಸೂರಿನಲ್ಲಿ ಒಬ್ಬರು ಪೇಪರ್ ಸಿಂಹ ಇದ್ದಾರೆ. ಹೆಸರಿಗೆ ಸಿಂಹ ಆದರೆ ಬಾಯಿ ಬಿಟ್ಟರೇ ವಿಷ. ಸುಳ್ಳು ಹೇಳೋದು, ವಿಷ ಬೀಜ ಬಿತ್ತುವುದೇ ಅವರ ಉದ್ಯೋಗ ಎಂದು ಕಿಡಿಕಾರಿದರು.
ಬಿಜೆಪಿಯವರು ಮೂಢನಂಬಿಕೆಯಲ್ಲಿ ನಂಬಿಕೆ ಇಟ್ಟವರು. ಆದ್ದರಿಂದಲೇ, ಯಡಿಯೂರಪ್ಪ ಸಿಎಂ ಆಗಿದ್ದಾಗ ಒಮ್ಮೆಯೂ ಚಾಮರಾಜನಗರಕ್ಕೆ ಬರಲಿಲ್ಲ. ಆದರೂ ಒಮ್ಮೆಯೂ ಪೂರ್ಣಾವಧಿ ಪೂರೈಸಲಿಲ್ಲ. ಬೊಮ್ಮಾಯಿ ಅವರು ಅಷ್ಟೇ ಚಾಮರಾಜನಗರಕ್ಕೆ ಬಂದು ಅಭಿವೃದ್ಧಿ ಕಾರ್ಯ ಕೈಗೊಳ್ಳದಿದ್ದರೇ ಇವರು ಎರಡು - ಮೂರು ತಿಂಗಳಿಗೇ ಅಧಿಕಾರದಿಂದ ಕೆಳಗಿಳಿಯುತ್ತಾರೆ ಎಂದು ವ್ಯಂಗ್ಯವಾಡಿದರು.