ಚಾಮರಾಜನಗರ: ಒಳ್ಳೆಯ ಹುಡುಗನನ್ನು ಹುಡುಕಿ ಮದುವೆ ಮಾಡಿಸುತ್ತೇನೆ ಎಂದು ಹೇಳಿ ನಂಬಿಸಿ ವ್ಯಕ್ತಿಯೊಬ್ಬ ತನ್ನ ಮೇಲೆ ಅತ್ಯಾಚಾರವೆಸಗಿ, ಪರಾರಿಯಾಗಿದ್ದಾನೆ ಎಂದು ಯುವತಿಯೋರ್ವಳು ಕೊಳ್ಳೇಗಾಲ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ನಗರದ ಬಡಾವಣೆಯೊಂದರ 24 ವರ್ಷದ ಯುವತಿ ತಾಲೂಕಿನ ಹಳೆ ಅಣಗಳ್ಳಿ ಗ್ರಾಮದ ದೊರೆಸ್ವಾಮಿ (37) ಎಂಬುವರ ವಿರುದ್ಧ ದೂರು ನೀಡಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ.
ಆರೋಪಿ ದೊರೆಸ್ವಾಮಿ, ಯುವತಿಯ ತಂದೆ ತಾಯಿಯನ್ನು ಪರಿಚಯಿಸಿಕೊಂಡು 'ನಿಮ್ಮ ಮಗಳಿಗೆ ಒಳ್ಳೆಯ ಹುಡುಗನನ್ನು ಹುಡುಕಿ ಮದುವೆ ಮಾಡಿಸುತ್ತೇನೆ' ಎಂದು ಹೇಳಿದ್ದಾನೆ. ನಂತರ ಪ್ರತಿನಿತ್ಯ ಆದರ್ಶ ನಗರ ಬಡಾವಣೆಗೆ ಬಂದು ಹೋಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ದೂರಿನಲ್ಲೇನಿದೆ?:
ಕೆಲವು ದಿನಗಳ ಹಿಂದೆ ನನ್ನನ್ನು ನೋಡಲು ತನ್ನ ಮನೆಗೆ ಹುಡುಗ ಬರುತ್ತಾನೆ ಎಂದು ದೊರೆಸ್ವಾಮಿ ನಂಬಿಸಿ ಅವರ ಹಳೆ ಅಣಗಳ್ಳಿ ಮನೆಗೆ ಕರೆದುಕೊಂಡು ಹೋಗಿದ್ದರು. ನನಗೆ ಆತ ಕೊಟ್ಟ ಪಾನೀಯ ಕುಡಿದಾಗ ಪ್ರಜ್ಞೆ ತಪ್ಪಿತ್ತು. ಎಚ್ಚರಗೊಂಡಾಗ ಕೈ ಕಾಲುಗಳನ್ನು ಕಟ್ಟಿಹಾಕಿ, ಬಾಯಿಗೆ ಬಟ್ಟೆ ತುರುಕಿದ್ದರು. ಭಯದಲ್ಲಿದ್ದ ನನ್ನ ಮೇಲೆ ದೊರೆಸ್ವಾಮಿ ಅತ್ಯಾಚಾರ ಎಸಗಿದ್ದ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ, ನನ್ನ ತಂದೆ ತಾಯಿಯನ್ನು ಕೊಲ್ಲುವುದಾಗಿ ಬೆದರಿಸಿದ್ದರು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಬಳಿಕ ಬೇರೆ ಹುಡುಗನ ಜತೆ ಮದುವೆ ಮಾಡಿಸುತ್ತೇನೆ ಎಂದು ಹೇಳಿ, ನನ್ನನ್ನು ಬೆದರಿಸಿ ಆಗಾಗ್ಗೆ ಅತ್ಯಾಚಾರ ಮಾಡುತ್ತಿದ್ದರು. 17 ದಿನಗಳ ಹಿಂದೆಯಷ್ಟೇ ಮುಡಿಗುಂಡ ದೇವಸ್ಥಾನವೊಂದರಲ್ಲಿ ನನಗೆ ದೊರೆಸ್ವಾಮಿ ತಾಳಿ ಕಟ್ಟಿದ್ದಾನೆ. ಕೊಳ್ಳೇಗಾಲದಲ್ಲಿ ಬಾಡಿಗೆ ಮನೆಯಲ್ಲಿ ಇರಿಸಿಕೊಂಡು ಮತ್ತೆ ಬೇರೆ ಹುಡುಗನ ಜತೆ ಮದುವೆ ಮಾಡಿಸುತ್ತೇನೆ ಎಂದು ಹೇಳಿ ಈಗ ನಾಪತ್ತೆಯಾಗಿದ್ದಾನೆ ಎಂದು ಯುವತಿ ದೂರಿನಲ್ಲಿ ವಿವರಿಸಿದ್ದಾಳೆ.
ಇದನ್ನೂ ಓದಿ:ಮಂಗಳೂರಲ್ಲಿ ಪಾದರಕ್ಷೆ ಮಳಿಗೆ ಮಾಲೀಕನಿಂದ ಗ್ರಾಹಕಿಗೆ ಲೈಂಗಿಕ ಕಿರುಕುಳ ಆರೋಪ: ಬಂಧನ