ಚಾಮರಾಜನಗರ:ಸಮಾಜಕ್ಕೆ ಹೀರೋ ಆದವರೊಬ್ಬರು ಹಾಗೂ ಕಾಡಿಗೆ ಕಂಟಕನಾಗಿದ್ದ ವ್ಯಕ್ತಿಯೊಬ್ಬ ಒಂದೇ ಗ್ರಾಮದಲ್ಲಿ ದೇವಾಲಯಗಳನ್ನು ಕಟ್ಟಿಸಿದ್ದರು. ಒಂದರಲ್ಲಿ ದೇವರಿಗೆ ನಿತ್ಯವೂ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದರೆ, ಇನ್ನೊಂದು ದೇವಾಸ್ಥಾನ ಭೂತ ಬಂಗಲೆಯಂತಾಗಿದೆ.
ಹೌದು, ಹನೂರು ತಾಲೂಕಿನ ಗೋಪಿನಾಥಂ ಗ್ರಾಮದಲ್ಲಿ ಅರಣ್ಯಾಧಿಕಾರಿಯಾಗಿದ್ದ ಶ್ರೀನಿವಾಸ್ ಮುಂದಾಳತ್ವದಲ್ಲಿ ನಿರ್ಮಾಣಗೊಂಡ ಮಾರಿಯಮ್ಮ ದೇವಾಸ್ಥಾನದಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಜೊತೆಗೆ ಅವರ ಭಾವಚಿತ್ರಕ್ಕೂ ಪೂಜೆ ಸಲ್ಲಿಸಲಾಗುತ್ತಿದೆ. ಆದರೆ, ಕಾಡುಗಳ್ಳ ವೀರಪ್ಪನ್ನಿಂದ ಜೀರ್ಣೋದ್ಧಾರಗೊಂಡ ಪೆರುಮಾಳ್ ದೇವಾಲಯಕ್ಕೆ ಯಾರೂ ಹೋಗದೇ ಭಣಗುಡುತ್ತಿದೆ.
ಬೇಟೆ ಮಾಡಿದ ಬಳಿಕ ಹಣ ಹಂಚಿಕೊಳ್ಳುವಾಗ ವೀರಪ್ಪನ್ಗೆ ಎರಡು ಪಾಲು, ಉಳಿದವರಿಗೆ ಒಂದು ಪಾಲಿನ ಜೊತೆಗೆ ದೇವರಿಗೂ ಒಂದು ಪಾಲೆಂದು ಹಣ ಎತ್ತಿಡಲಾಗುತ್ತಿತ್ತಂತೆ. ಹೀಗೆ ದೇವರಿಗೆ ಎತ್ತಿಡುತ್ತಿದ್ದ ಹಣದಿಂದಲೇ ಪುದೂರು ಸಮೀಪದಲ್ಲಿ ಪೆರುಮಾಳ್ ದೇವಸ್ಥಾನವನ್ನು ವೀರಪ್ಪನ್ ಕಟ್ಟಿಸಿದ್ದ. ಪ್ರತಿವರ್ಷ ಇಲ್ಲಿ ಜಾತ್ರೆ ಮಾಡಿ, ರಾತ್ರಿ ವೇಳೆ ನಾಟಕವನ್ನೂ ಮಾಡಿಸುತ್ತಿದ್ದ. ಪೊಲೀಸರು ವೀರಪ್ಪನ್ ಮೇಲೆ ಹದ್ದಿನ ಕಣ್ಣಿಟ್ಟ ಬಳಿಕ ಜನರು ದೇವಾಲಯಕ್ಕೆ ಹೋಗುವುದು ಕಡಿಮೆಯಾಯಿತು. ವೀರಪ್ಪನ್ ಮರಣದ ಬಳಿಕವೂ ಕೆಲವು ವರ್ಷ ಹಬ್ಬ ನಡೆದಿದೆಯಾದರೂ ಅಷ್ಟೇನೂ ಜನರು ಹೋಗುವುದಿಲ್ಲ ಎಂದು ಗೋಪಿನಾಥಂ ಗ್ರಾಮದ ಮಹಾಲಿಂಗಂ ಹೇಳುತ್ತಾರೆ.