ಚಾಮರಾಜನಗರ:ಸತತ ಮನವಿ, ಪ್ರತಿಭಟನೆಗಳ ಬಳಿಕ ಗ್ರಾಮಕ್ಕೆ ಬರುತ್ತಿದ್ದ ಸರ್ಕಾರಿ ಬಸ್ ಕೊರೊನಾ ಲಾಕ್ಡೌನ್ ಬಳಿಕ ಮತ್ತೆ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಪರದಾಡುತ್ತಿರುವ ಘಟನೆ ಕಟ್ನವಾಡಿ, ಉಗೇದನವಾಡಿ ಹಾಗೂ ಉಡಿಗಾಲ ಗ್ರಾಮದಲ್ಲಿ ನಡೆದಿದೆ.
ಕೊರೊನಾ ಲಾಕ್ಡೌನ್ಗೂ ಮುನ್ನ ಬೆಳಗ್ಗೆ 7ಕ್ಕೆ ಚಾಮರಾಜನಗರದಿಂದ ಹೊರಟು ಉಡಿಗಾಲ, ಕಟ್ನವಾಡಿ, ಕೊತ್ತಲವಾಡಿ, ತೆರಕಣಾಂಬಿಗೆ ತೆರಳಿ ಮತ್ತೆ ಚಾಮರಾಜನಗರಕ್ಕೆ ಹಿಂತಿರುಗುತ್ತಿದ್ದ ಬಸ್ ಕಳೆದ 6 ತಿಂಗಳಿನಿಂದ ಸ್ಥಗಿತವಾಗಿದೆ. ಇದರಿಂದ ಚಾಮರಾಜನಗರ, ಗುಂಡ್ಲುಪೇಟೆ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ನಿತ್ಯ ಖಾಸಗಿ ಬಸ್ ಆಶ್ರಯಿಸಿ ಸಮಯಕ್ಕೆ ತಕ್ಕಂತೆ ತರಗತಿಗಳಿಗೆ ತೆರಳಲು ಪ್ರಯಾಸ ಪಡುತ್ತಿದ್ದಾರೆ.
ಖಾಸಗಿ ಬಸ್ ಬರದಿದ್ದರೆ ಅಥವಾ ತಡವಾದರೆ ಸರ್ಕಾರಿ ಬಸ್ ಹಿಡಿಯಲು ಉಡಿಗಾಲಕ್ಕೆ, ತೆರಕಣಾಂಬಿಗೆ ನಡೆದು ಹೋಗಬೇಕು. ಇಲ್ಲವೇ ಅವರಿವರ ವಾಹನ ಆಶ್ರಯಿಸಬೇಕಾದ ಸ್ಥಿತಿಯಿದ್ದು, ಕೆಎಸ್ಆರ್ಟಿಸಿ ಅಧಿಕಾರಿಗಳಿಗೆ ಕಳೆದ 1 ತಿಂಗಳಿನಿಂದ 4 ಬಾರಿ ಮನವಿ ಮಾಡಿದರೂ ಕೇವಲ ಸಬೂಬು ಹೇಳುತ್ತಾರೆಯೇ ಹೊರತು ಬಸ್ ಮಾತ್ರ ಬಿಡುತ್ತಿಲ್ಲ ಎಂದು ಕಟ್ನವಾಡಿ ಗ್ರಾಮದ ಗುರುಮಲ್ಲಪ್ಪ ಆಕ್ರೋಶ ಹೊರಹಾಕಿದ್ದಾರೆ.
ಕೆಎಸ್ಆರ್ಟಿಸಿ ಡಿಸಿಗೆ ಪತ್ರ ಬರೆದು ಬರೆದು ಸಾಕಾಗಿದ್ದು, ಇನ್ನು ಮುಖ್ಯಮಂತ್ರಿಗೆ, ಸಾರಿಗೆ ಸಚಿವರಿಗೆ ಪತ್ರ ಬರೆದು ನಮ್ಮ ಕಷ್ಟ ತಿಳಿಸುತ್ತೇನೆಂದು ಅವರು ಕಿಡಿಕಾರಿದರು.
ಇತ್ತೀಚೆಗಷ್ಟೇ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ರಾಜ್ಯಾದ್ಯಂತ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸಾರಿಗೆ ಸಂಸ್ಥೆ ಬಸ್ ಕಾರ್ಯ ನಿರ್ವಹಿಸಬೇಕೆಂಬ ಮನವಿಗೆ ಸಾರಿಗೆ ಇಲಾಖೆ ಸಮರ್ಪಕವಾಗಿ ಸ್ಪಂದಿಸಿತ್ತು. ಆದರೆ ಇನ್ನೂ ಕೂಡ ಈ ಗ್ರಾಮಗಳ ಸಾರಿಗೆ ಬವಣೆ ಈಡೇರದಿರುವುದು ವಿಪರ್ಯಾಸವಾಗಿದೆ.