ಚಾಮರಾಜನಗರ:ಡಾ.ಜಿ.ಪರಮೇಶ್ವರ್ ಅಭಿಮಾನಿ ಬಳಗ ಹಾಗೂ ಡಾ.ಜಿ.ಪರಮೇಶ್ವರ್ ಯುವ ಸೈನ್ಯದ ವತಿಯಿಂದ ಮಾರ್ಚ್ 1ರಂದು ಗುಂಡ್ಲುಪೇಟೆ ತಾಲೂಕಿನ ಬೆಂಡರವಾಡಿಯಲ್ಲಿ 101 ಜೋಡಿಗಳ ಸಾಮೂಹಿಕ ವಿವಾಹ, ಎಂ.ಗಂಗಾಧರಯ್ಯ ಸ್ಮಾರಕ ಗ್ರಂಥಾಲಯ ಉದ್ಘಾಟನೆ ಮತ್ತು ಎಚ್.ಎಂ.ಗಂಗಾಧರಯ್ಯ ರಾಷ್ಟ್ರೀಯ ಸಂಸ್ಕೃತಿ ಪುರಸ್ಕಾರ ಪ್ರಶಸ್ತಿ ಪ್ರಧಾನ ಸಮಾರಂಭ ಆಯೋಜಿಸಲಾಗಿದೆ ಎಂದು ಸಾಮೂಹಿಕ ವಿವಾಹದ ಸಂಯೋಜಕ ಡಾ.ಮಹದೇವ್ ಭರಣಿ ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮೂಹಿಕ ವಿವಾಹಕ್ಕೆ 71 ಜೋಡಿಗಳು ನೋಂದಾಯಿಸಿಕೊಂಡಿದೆ. ಉಳಿದ 29 ಜೋಡಿಗಳು ಫೆಬ್ರವರಿ 29ರವರಗೆ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ನಿಡುಮಾಮಿಡಿಶ್ರೀ, ಉರಿಲಿಂಗಿ ಪೆದ್ದಿಮಠದ ಸ್ವಾಮೀಜಿ, ಮನೋರಖ್ಖಿತ ಭಂತೇಜಿ, ಸಮಾರಂಭದ ಸಾನ್ನಿಧ್ಯ ವಹಿಸಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್‍ಕುಮಾರ್ ಕಾರ್ಯಕ್ರಮ ಉದ್ಘಾಟಿಸುವರು ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಮೂಹಿಕ ವಿವಾಹದ ಸಂಯೋಜಕ ಡಾ.ಮಹದೇವ್ ಭರಣಿ ಡಾ. ಜಿ. ಪರಮೇಶ್ವರ್ ದಂಪತಿ 101 ಜೋಡಿಗೆ ಮಾಂಗಲ್ಯ ವಿತರಿಸಲಿದ್ದು, ಗ್ರಂಥಾಲಯವನ್ನು ಡಾ.ಜಿ. ಪರಮೇಶ್ವರ್ ಉದ್ಘಾಟಿಸಲಿದ್ದಾರೆ. ಕವಿ, ಚಿಂತಕರಾದ ಲಕ್ಷ್ಮೀಪತಿ ಕೋಲಾರ್ ಅವರಿಗೆ 'ಶಿಕ್ಷಣ ಭೀಷ್ಮ ಎಚ್.ಎಂ.ಗಂಗಾಧರಯ್ಯ ರಾಷ್ಟ್ರೀಯ ಸಂಸ್ಕೃತಿ ಪುರಸ್ಕಾರ'ವನ್ನು ಬಹುಭಾಷಾ ನಟ ಪ್ರಕಾಶ್ ಪ್ರಧಾನ ಮಾಡಲಿದ್ದಾರೆ. ಪ್ರಶಸ್ತಿಯು 1 ಲಕ್ಷ ರೂ. ಹಾಗೂ ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ ಎಂದು ಅವರು ಮಾಹಿತಿ ನೀಡಿದರು.
ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ 300ಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸಲಾಗುವುದು. ಈ ಕಾರ್ಯಕ್ರಮಕ್ಕಾಗಿ ಗುಂಡ್ಲುಪೇಟೆ ತಾಲೂಕಿನ ಬೆಂಡರವಾಡಿಯಲ್ಲಿ 6 ಎಕರೆ ವಿಸ್ತೀರ್ಣದಲ್ಲಿ ವೇದಿಕೆ ಸಜ್ಜಾಗುತ್ತಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ.ಜಿ.ಪರಮೇಶ್ವರ ಅಭಿಮಾನಿಗಳ ಬಳಗದ ಅಧ್ಯಕ್ಷ ಅಜಯ್‍ಶಂಭು ಸೇರಿದಂತೆ ಇನ್ನಿತರರು ಇದ್ದರು.