ಚಾಮರಾಜನಗರ:ಗಡಿಜಿಲ್ಲೆ ಚಾಮರಾಜನಗರದಲ್ಲಿ ಆರಂಭದಲ್ಲಿ ಜನರ ಮೊಗದಲ್ಲಿ ಕೊರೊನಾ ಭಯ ಕಾಣಿಸುತ್ತಿರಲಿಲ್ಲ. ಆದ್ರೀಗ ಆತಂಕ ಶುರುವಾಗಿದೆ. ಮದುವೆ ಸೇರಿದಂತೆ ಶುಭ ಕಾರ್ಯಗಳಿಗೆ ಆಗಮಿಸಲು ಜನರು ಆಸಕ್ತಿ ತೋರುತ್ತಿಲ್ಲ.
ಮದುವೆ ಮನೆಗಳಲ್ಲಿ ಭರ್ಜರಿ ಭೋಜನ ಸಿದ್ಧ ಮಾಡಿದ್ದವರು ಜನರಿಲ್ಲದೆ ತಲೆ ಮೇಲೆ ಕೈ ಇಟ್ಟು ಕುಳಿತರು. ಕೆಲವರು ಸರ್ಕಾರದ ಆದೇಶ ನಮಗೆ ತಿಳಿದಿದ್ದರಿಂದ ಹೆಚ್ಚಿನ ಜನರು ಬರಲ್ಲ ಅನ್ನೋದು ಗೊತ್ತಿತ್ತು. ಹಾಗಾಗಿ ಜನರನ್ನು ನೋಡಿ ಊಟ ತಯಾರಿಸಿದ್ದೇವೆ ಎನ್ನುತ್ತಾರೆ.
ಮುನ್ನೆಚ್ಚರಿಕೆ ಕ್ರಮಕ್ಕೆ ಜನರ ಉತ್ತಮ ಸ್ಪಂದನೆ ಮಹಾಮಾರಿಯ ಆತಂಕದಿಂದ ಹೋಟೆಲ್ ವ್ಯಾಪಾರ, ತರಕಾರಿ ಮಾರುಕಟ್ಟೆಯ ವ್ಯವಹಾರ ಕುಸಿದಿದೆ. ವೀಕೆಂಡ್ ಬಂತೆಂದರೆ ವೆಜ್ ಹಾಗೂ ನಾನ್-ವೆಜ್ ಹೋಟೆಲ್ಗಳಿಗೆ ಮುತ್ತಿಗೆ ಹಾಕುತ್ತಿದ್ದ ಗ್ರಾಹಕರು ಕೊರೊನಾ ಭೀತಿಯಿಂದ ಹೋಟೆಲ್ನತ್ತ ಮುಖ ಮಾಡದಿರುವುದು ಒಂದೆಡೆಯಾದರೆ, ಜನರ ಸಂಚಾರವೂ ತೀರಾ ವಿರಳವಾಗಿದೆ. ಚಿತ್ರಮಂದಿರಗಳು ಬಂದ್ ಆಗಿರುವುದರಿಂದ ಥಿಯೇಟರ್ನತ್ತ ಯಾರೂ ಸುಳಿಯಲಿಲ್ಲ. ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲೂ ಅಲ್ಲೊಬ್ಬರು ಇಲ್ಲೊಬ್ಬರು ಇರುವುದು ಕಂಡು ಬಂತು.
ಒಂದು ವಾರಗಳ ಕಾಲ ಜಾತ್ರೆ, ಸಂತೆ, ಥಿಯೇಟರ್ ಬಂದ್ ಮಾಡಿರುವ ಸರ್ಕಾರದ ಕ್ರಮವನ್ನು ಸಾರ್ವಜನಿಕರು ಸ್ವಾಗತಿಸಿದ್ದು, ವ್ಯವಹಾರಕ್ಕೆ ತೊಂದರೆಯಾದರೂ ಪರವಾಗಿಲ್ಲ. ಜನರು ಸೋಂಕು ಪೀಡಿತರಾಗಬಾರದು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.