ಚಾಮರಾಜನಗರ: ನನ್ನನ್ನು ಉಂಡಾಡಿಗುಂಡ ಎಂದು ಕರೆದ ವಿ.ಶ್ರೀನಿವಾಸ್ ಪ್ರಸಾದ್ ಹಾಫ್ ಮೀಲ್ಸ್ ಗಿರಾಕಿನಾ ಎಂದು ಕಾಗಲವಾಡಿ ಶಿವಣ್ಣ, ವಿಶ್ರೀ ಟೀಕೆಗೆ ತಿರುರೇಟು ನೀಡಿದರು.
ಗುಂಡ್ಲುಪೇಟೆಯ ತೆರಕಣಾಂಬಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ದೇವರು ನನಗೆ ಆರೋಗ್ಯ ಕೊಟ್ಟಿದ್ದಾನೆ. ತಿಂದಿದ್ದನ್ನು ಅರಗಿಸಿಕೊಳ್ಳುವ ಶಕ್ತಿ ನೀಡಿದ್ದಾನೆ. ವಿಶ್ರೀಗೆ ಅರ್ಧ ಊಟ ಎಂದು ಬರೆದಿದ್ದಾನಾ ಎಂದು ಕಿಡಿಕಾರಿದರು.
ನಾನು ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ಸಂಸದ. ರೈಲ್ವೆ ಬಜೆಟ್ ಕುರಿತು ಕನ್ನಡದಲ್ಲೇ ಮಾತನಾಡಿದ ಸಂಸದ. ನಿಮ್ಮ-ನನ್ನ ಕೊಡುಗೆಗಳ ಕುರಿತು ಚರ್ಚೆಗೆ ಬನ್ನಿ ಎಂದರೆ ಸರಿ ಒಪ್ಪಬಹುದು. ಧ್ರುವನಾರಾಯಣ ಗೆಯ್ಯೋ ಎತ್ತು, ಮತ್ತೊಬ್ಬರು ಜಾತ್ರೆ ಎತ್ತು. ಜಾತ್ರೆ ಎತ್ತಿಗೆ ಹುಲ್ಲು ನೀಡಬೇಕೇ ಎಂದು ವ್ಯಂಗವಾಡಿದರು.
ಕೇಡುಗಾಲಕ್ಕೆ ನಾಯಿ ಮೊಟ್ಟೆ ಇಟ್ಟಂತೆ ಮಾತನಾಡುತ್ತಿರುವುದು ಅವರಿಗೆ ಶೋಭೆಯಲ್ಲ. ಬಟನ್ ಒತ್ತಿ ಕೋಟಿ-ಕೋಟಿ ಸಂಪಾದಿಸಿದೆ ಎನ್ನುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ ಉಪಸ್ಥಿತರಿದ್ದರು.