ಚಾಮರಾಜನಗರ:ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಜನಮನ್ನಣೆ ಗಳಿಸಿದ್ದ ಬಿ.ಪುಟ್ಟಸ್ವಾಮಿ ತಮ್ಮ ನೌಕರಿಗೆ ರಾಜೀನಾಮೆ ನೀಡಿದ್ದು, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲಲು ಅಖಾಡ ಸಿದ್ಧಪಡಿಸಿಕೊಂಡಿದ್ದಾರೆ. ಮೈಸೂರಿನ ಐಜಿಪಿ ಕಚೇರಿಯಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನ ವಿಭಾಗದಲ್ಲಿ ಸದ್ಯ ಕರ್ತವ್ಯ ನಿರ್ವಹಿಸುತ್ತಿರುವ ಇವರು ಸ್ವಯಂ ನಿವೃತ್ತಿ ತೆಗೆದುಕೊಳ್ಳಲು ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾರೆ. ಸಂಕ್ರಾಂತಿಯ ನಂತರ ಅಧಿಕೃತವಾಗಿ ರಾಜಕೀಯಕ್ಕೆ ಧುಮುಕಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮೈಸೂರು ನಗರದಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿ ವೃತ್ತಿ ಆರಂಭಿಸಿ ಬಳಿಕ ಪಿಎಸ್ಐ ಹುದ್ದೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ರಾಮಾಪುರ, ಕೊಳ್ಳೇಗಾಲ, ಚಾಮರಾಜನಗರದಲ್ಲಿ ಪಿಎಸ್ಐ, ಪಿಐ ಆಗಿ ಪುಟ್ಟಸ್ವಾಮಿ ಕರ್ತವ್ಯ ನಿರ್ವಹಿಸಿದ್ದರು. ಜನಸ್ನೇಹಿ ಆಡಳಿತದಿಂದ ಸಾಕಷ್ಟು ಅಭಿಮಾನಿ ಬಳಗ ಹೊಂದಿದ್ದಾರೆ. ಅಕ್ರಮ ಮದ್ಯ ಮಾರಾಟದ ವಿರುದ್ಧ ತೆಗೆದುಕೊಂಡ ಕಠಿಣ ಕ್ರಮಗಳಿಂದ ಮಹಿಳಾ ಅಭಿಮಾನಿಗಳ ಬಳಗವು ಇವರಿಗೆ ತುಸು ಹೆಚ್ಚಿದ್ದು ಚುನಾವಣೆಯಲ್ಲಿ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.