ಚಾಮರಾಜನಗರ: ಜಿಲ್ಲೆಯ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಜಿಲ್ಲಾಡಳಿತ ಭವನದ ಜೆ ಹೆಚ್ ಪಟೇಲ್ ಸಭಾಂಗಣದಲ್ಲಿಂದು ಜನತಾ ದರ್ಶನ ಕಾರ್ಯಕ್ರಮ ನಡೆಯಿತು. 280ಕ್ಕಿಂತಲೂ ಹೆಚ್ಚು ಜನರು ಸಚಿವರಿಗೆ ಅಹವಾಲು ಸಲ್ಲಿಸಿ ಅಧಿಕಾರಿಗಳ ವಿರುದ್ಧ ದೂರುಗಳ ಸುರಿಮಳೆಗೈದರು. ಈ ವೇಳೆ, ರಸ್ತೆ ಅಗಲೀಕರಣಕ್ಕಾಗಿ ಸ್ಥಳ ಕೊಟ್ಟು 6 ವರ್ಷಗಳಾದರೂ ಪರಿಹಾರ ಸಿಗದಿದ್ದಕ್ಕೆ ನಾಸಿರ್ ಎಂಬವರು ತೀವ್ರ ಅಸಮಾಧಾನ ಹೊರಹಾಕಿದರು.
ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ವೇಳೆ ಮನೆ ಒಡೆದು ಹಾಕಿದ್ದೀರಿ, ಆದರೆ 6 ವರ್ಷಗಳಾದರೂ ಪರಿಹಾರ ಸಿಕ್ಕಿಲ್ಲ. ಹಣ ಇಲ್ಲದೇ ಮನೆ ಕಟ್ಟಿಕೊಳ್ಳಲಾಗುತ್ತಿಲ್ಲ. ನನಗೆ 40 ವರ್ಷ ಆಗಿದೆ, ಯಾರು ನನಗೆ ಹೆಣ್ಣು ಕೊಡುತ್ತಿಲ್ಲ. ಎಲ್ಲಿ ಹೋದರೂ ಮನೆ ಇದೆಯಾ ಎಂದು ಕೇಳುತ್ತಾರೆ. ಮದುವೆಯಾದ ಮೇಲೆ ಹೆಂಡತಿಯನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿಯಾ ಅಂತಾ ಪ್ರಶ್ನಿಸುತ್ತಾರೆ ಎಂದು ಅಳಲು ತೋಡಿಕೊಂಡರು. ಪರಿಹಾರ ನೀಡಲಾಗದಿದ್ದರೇ ದಯಾ ಮರಣ ಕೊಡಿ ಎಂದು ಆಕ್ರೋಶ ಹೊರಹಾಕಿದರು. ಈ ವೇಳೆ ಶಾಸಕ ಸಿ ಪುಟ್ಟರಂಗಶೆಟ್ಟಿ ಮಾತನಾಡಿ ಪ್ರಕರಣ ಕೋರ್ಟ್ನಲ್ಲಿರುವುದರಿಂದ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದರು.
ತಿಂಗಳಿಗೆ 2 ರೂ. ಸಂಬಳ: ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ರಾಮಸಮುದ್ರದದ ಹರಳುಕೋಟೆ ಜನಾರ್ದನ ದೇಗುಲದ ಅರ್ಚಕ ಅನಂತ ಪ್ರಸಾದ್ ಮನವಿ ಸಲ್ಲಿಸಿ, ತನಗೆ ಈಗಲೂ ತಿಂಗಳಿಗೆ ಅತಿ ಕಡಿಮೆ ವೇತನ ಕೊಡಲಾಗುತ್ತಿದೆ. ಸರ್ಕಾರ ಕೊಡುವ ಹಣ ಅಗರಬತ್ತಿಗೂ ಸಾಲುತ್ತಿಲ್ಲ ಎಂದರು. ಇದಕ್ಕೆ, ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವರು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.