ಚಾಮರಾಜನಗರ: ಹಿಂದಿ ಸುಂದರ ಭಾಷೆ, ಅಕ್ಕರೆಯಿಂದ ಈ ಭಾಷೆ ಕಲಿಸಿದರೆ ಅದು ಹೇರಿಕೆಯಾಗಲ್ಲ ಎಂದು ಹೇಳುವ ಮೂಲಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಕೇಂದ್ರದ ನಡೆಗೆ ಬೆಂಬಲ ಸೂಚಿಸಿದ್ರು.
ರಾಜ್ಯ ಪ್ರೌಢ ಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘ ಆಯೋಜಿಸಿದ್ದ ಹಿಂದಿ ಶೈಕ್ಷಣಿಕ ಸಮಾರಂಭ ಮತ್ತು ಹಿಂದಿ ದಿವಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು ಉಪಾಧ್ಯಾಯರಲ್ಲಿ ಏಟು ತಿಂದು ಹಿಂದಿ ಕಲಿತೆ. ಅಟಲ್‌ಜೀ ಭಾಷಣವನ್ನು ಕೇಳಿ ಕೇಳಿ ಹೆಚ್ಚು ಹಿಂದಿ ಕಲಿತೆ. ಆದ್ದರಿಂದ, ಅಕ್ಕರೆಯಿಂದ ಹಿಂದಿ ಕಲಿಸಿದಾಗ ಹಿಂದಿ ಹೇರಿಕೆ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದಿದ್ದಾರೆ. ಯಾರೂ ಕೂಡ ಹಿಂದಿಯನ್ನು ವಿರೋಧಿಸಬಾರದು. ನಮ್ಮತನ ಉಳಿಸಿಕೊಂಡು ಅನ್ಯ ಭಾಷೆಯನ್ನು ಪ್ರೀತಿಸಬೇಕು, ಮಾಜಿ ಸಚಿವ ಸಿ.ಎಂ.ಉದಾಸಿ 9 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಾರೆ ಎಂದರು.
ವರ್ಗಾವಣೆ ನೀತಿ ಬದಲು
ಶಿಕ್ಷಕರು ಇಷ್ಟ ಪಟ್ಟು ಶಾಲೆಗೆ ಹೋದಾಗ ಮಾತ್ರ ಮಕ್ಕಳಿಗೆ ಉತ್ತಮವಾಗಿ ಪಾಠ ಹೇಳಲು ಸಾಧ್ಯ. ಕಡ್ಡಾಯ ಶಿಕ್ಷಕರ ವರ್ಗಾವಣೆ ಎನ್ನುವುದೇ ತಪ್ಪು ಎಂದು ಶಿಕ್ಷಣ ಇಲಾಖೆಯ ವರ್ಗಾವಣೆ ನೀತಿಗೆ ಅಸಮಾಧಾನ ವ್ಯಕ್ತಪಡಿಸಿದರು. ಶಿಕ್ಷಣ ಇಲಾಖೆಯಲ್ಲಿನ ನ್ಯೂನತೆಗಳನ್ನ ಸರಿಪಡಿಸಲು ಶೀಘ್ರ ಸಭೆ ಕರೆಯಲಾಗುತ್ತದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಜಾರಿಗೊಳಿಸಲು ಚಿಂತಿಸಲಾಗಿದೆ ಎಂದು ಶಿಕ್ಷಕರಿಗೆ ಸಿಹಿಸುದ್ದಿ ತಿಳಿಸಿದ್ರು.