ಚಾಮರಾಜನಗರ: ವಿದ್ಯಾಭ್ಯಾಸದ ಮುಖ್ಯ ಘಟ್ಟವಾದ ಪಿಯುಸಿಯಲ್ಲಿ ಮುಗ್ಗರಿಸಿದ್ದ ಅರಣ್ಯ ವೀಕ್ಷಕರೊಬ್ಬರು ಬರೋಬ್ಬರಿ 8 ವರ್ಷದ ಬಳಿಕ ಪಿಯುಸಿ ಪಾಸಾಗುವ ಮೂಲಕ ಪಾಲಕರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಹೌದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ಅರಣ್ಯ ವಲಯದಲ್ಲಿ ಫಾರೆಸ್ಟ್ ವಾಚರ್ ಆಗಿರುವ ರಾಜೇಶ್(27) ಎಂಬಾತ ಇಂಗ್ಲಿಷ್ ವಿಷಯದಲ್ಲಿ ಫೇಲ್ ಆಗಿದ್ದ. ಈ ಬಾರಿಯ ಪೂರಕ ಪರೀಕ್ಷೆಯಲ್ಲಿ ಬರೆದು ಪಿಯುಸಿ ಪಾಸಾಗುವ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ.
ಗಿರಿಜನರಲ್ಲೇ ಎಸ್ಎಸ್ಎಲ್ಸಿ ಪಾಸಾದ ಮೊದಲ ವ್ಯಕ್ತಿ: ಮೈಸೂರಿನ ಸರಗೂರು ತಾಲೂಕಿನ ಹಿರೇಹಳ್ಳಿ ಗ್ರಾಮದ ರಾಜ-ಮಹಾದೇವಮ್ಮ ಎಂಬುವರ ಮಗನಾದ ರಾಜೇಶ್ ತಮ್ಮೂರಿನ ಗಿರಿಜನರಲ್ಲೇ ಎಸ್ಎಸ್ಎಲ್ಸಿ ಪಾಸಾದ ಮೊದಲ ವ್ಯಕ್ಯಿ. 5ರಿಂದ 10ನೇ ತರಗತಿವರೆಗೆ ಬಿಳಿಗಿರಿರಂಗನಬೆಟ್ಟದ ವಿಜಿಕೆಕೆಯಲ್ಲಿ ಓದಿ, ಬಳಿಕ ಸರಗೂರು ಕಾಲೇಜಿಗೆ ಸೇರ್ಪಡೆಯಾಗಿದ್ದ. 2011-12ರ ದ್ವಿತೀಯ ಪಿಯು ಇಂಗ್ಲಿಷ್ನಲ್ಲಿ ಅನುತ್ತೀರ್ಣಗೊಂಡು, ಪೂರಕ ಪರೀಕ್ಷೆಯಲ್ಲೂ ಫೇಲಾಗಿದ್ದ. ಅದಾದ ಬಳಿಕ ಎರಡು ವರ್ಷಗಳ ಹಿಂದೆ ವಾಚರ್ ನೌಕರಿ ಹಿಡಿದ ಬಳಿಕ ಪಾಸ್ ಮಾಡಬೇಕೆಂದು ಹಠ ತೊಟ್ಟು ಕಳೆದ ಪೂರಕ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ.