ಚಾಮರಾಜನಗರ:ಆನೆಯ ಬೇಟೆ ಎಂದ ಕೂಡಲೇ ದಂತಕ್ಕಾಗಿ ಎಂದುಕೊಳ್ಳುವುದು ಸಾಮಾನ್ಯ. ಆದರೆ, ಮಾನವನ ದುರಾಸೆಗೆ ಬಲಿಯಾಗಿವೆ ಎಂಬುದಕ್ಕೆ ಇಲ್ಲಿದೆ ಸಾಕ್ಷ್ಯ.
ಮೂಢನಂಬಿಕೆಗಳಿಗೆ ಹೆಣ್ಣಾನೆಗಳನ್ನು ಕೊಲ್ಲಲಾಗುತ್ತಿದೆ ಎಂಬುದನ್ನು ಅರಣ್ಯ ಇಲಾಖೆಯ ಕೆಲ ಉನ್ನತ ಅಧಿಕಾರಿಗಳೇ ಅಲ್ಲಗಳೆಯುತ್ತಿದ್ದಾರೆ. ಕಾಡುಗಳ್ಳ ವೀರಪ್ಪನ್ ಸೆರೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸ್ ಅಧಿಕಾರಿ ಸಿದ್ದರಾಜ ನಾಯ್ಕ ಅವರು ಏಕೆ ಹೆಣ್ಣಾನೆಗಳನ್ನು ಬೇಟೆಯಾಡಲಾಗುತ್ತಿದೆ ಎಂಬುದರ ಕುರಿತ ಮಾಹಿತಿಯನ್ನು ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.
ಹನೂರು ತಾಲೂಕಿನ ಲೊಕ್ಕನಹಳ್ಳಿ ಭಾಗದ ಕಂಡಯ್ಯನಪಾಲ್ಯ ಗ್ರಾಮದ ಮಲ್ಲೇಗೌಡ ಎಂಬಾತನನ್ನು ಆನೆ ಬೇಟೆ ವಿಚಾರಕ್ಕೆ ದಸ್ತಗಿರಿ ಮಾಡಿ ವಿಚಾರಣೆಗೆ ಒಳಪಡಿಸಿದ ವೇಳೆ ಕೇವಲ ಹೆಣ್ಣಾನೆಗಳನ್ನು ಮಾತ್ರ ಕೊಲ್ಲುವುದಾಗಿ ತಿಳಿಸಿದ ಎಂದರು.
ಪೊಲೀಸ್ ಅಧಿಕಾರಿ ಸಿದ್ದರಾಜನಾಯ್ಕ ಮಾತು ದಂತ ಇರದ ಹೆಣ್ಣಾನೆಗಳನ್ನು ಏಕೆ ಕೊಲ್ಲುತ್ತೀಯಾ ಎಂಬ ಪ್ರಶ್ನೆಗೆ ಗೋವುಗಳಿಗೆ ಇರುವಂತೆ ಆನೆಯ ಎದೆಯಲ್ಲಿ ಗೋರಂಧ (ಗೋರೋಜನ) ಇರಲಿದ್ದು, ಅದನ್ನು ಔಷಧಿಯಾಗಿ ಬಳಸುತ್ತಾರೆ. ಆದ್ದರಿಂದ ಹೆಣ್ಣಾನೆಗಳನ್ನು ಕೊಲ್ಲುತ್ತಿದ್ದುದಾಗಿ ಹೇಳಿದ್ದ ಎಂದು ಪಿಎಸ್ಐ ಸಿದ್ದರಾಜ ನಾಯ್ಕ ತಿಳಿಸಿದರು.
ಚೀನಾ, ಅರೇಬಿಕ್ ದೇಶಗಳಲ್ಲಿ ಔಷಧಿ ತಯಾರಿಸಲಿದ್ದು, ಆಗ ಕೆಲವು ಶ್ರೀಮಂತರು ಆನೆ ಕಾಲಿನಿಂದ ಕುರ್ಚಿ, ಸಿಂಹಾಸನವನ್ನೆಲ್ಲಾ ತಯಾರಿಸುತ್ತಿದ್ದರು. ಈ ಉದ್ದೇಶಕ್ಕಾಗಿ ಹೆಣ್ಣಾನೆಗಳನ್ನು ಕೊಲ್ಲುತ್ತಾರೆಂದು ಮಲ್ಲೇಗೌಡನ ಮೂಲಕ ತಿಳಿಯಿತು ಎಂದು ಹೇಳಿದ್ದಾರೆ.
ಆನೆ ಹಲ್ಲು, ಕಾಲು, ಮೂಳೆಗಳು, ಬಾಲದ ಕೂದಲು, ದಂತಕ್ಕಾಗಿ ಆನೆಯನ್ನು ಸಾಯಿಸಲಾಗುತ್ತಿದೆ. ಈಗ ಹೆಣ್ಣಾನೆಗಳಿಗೂ ಕಂಟಕ ಇದೆ. ಈ ದಿಸೆಯಲ್ಲೂ ಪರಿಸರ ಪ್ರೇಮಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಯೋಚಿಸಬೇಕೆಂದು ಅವರು ತಿಳಿಸಿದರು.
ಇನ್ನೂ ಜೀವಂತ ಈ ಬೇಟೆ: ಆನೆ ಕೊಂದ ಬಳಿಕ ಕೊಡಲಿ, ಮಚ್ಚಿನಿಂದ ದಂತಗಳು, ಹಲ್ಲನ್ನು ಬೇಟೆಗಾರರು ಕೀಳುತ್ತಿದ್ದರು. ಆದರೆ, ಕಳೆದ ವರ್ಷ ಕಾವೇರಿ ವನ್ಯಜೀವಿ ಧಾಮದಲ್ಲಿ ಆನೆಕೊಂದು ಆ್ಯಸಿಡ್ ಮೂಲಕ ದಂತ ಹೊತ್ತೊಯ್ದಿದ್ದರು. ಇದು ಕಳ್ಳ ಬೇಟೆ ಶಿಬಿರದ ಕೂಗಳತೆ ದೂರದಲ್ಲಿ ನಡೆದದ್ದು ವಿಪರ್ಯಾಸ. ಒಂದು ಕಡೆ ಸಂಘರ್ಷ ಮತ್ತೊಂಡೆದೆ ಬೇಟೆಗಾರರ ಕೃತ್ಯಗಳಿಗೆ ಬಲಿಯಾಗುತ್ತಿರುವ ಭೂಮಿ ಮೇಲಿನ ದೊಡ್ಡಪ್ರಾಣಿಗೆ ಪರಿಣಾಮಕಾರಿ ರಕ್ಷಣೆ ಅಗತ್ಯವಿದೆ.