ಚಾಮರಾಜನಗರ:ಕರ್ನಾಟಕದ ಕಟ್ಟಕಡೆಯ ಗ್ರಾಮವಾದ ಹನೂರು ತಾಲೂಕಿನ ಗೋಪಿನಾಥಂ ಗ್ರಾಮಕ್ಕೆ ಇಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಗ್ರಾಮಕ್ಕೆ ರಸ್ತೆ, ಸಾರಿಗೆ ವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕೊಡಿಸುವ ಭರವಸೆ ನೀಡಿದರು.
ಇಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಗೋಪಿನಾಥಂ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡುವ ಮೊದಲು ಸಚಿವರು ಇಂದು ಮಾಡುವ ಮುನ್ನ ಮಕ್ಕಳು ಮತ್ತು ಪೋಷಕರ ಸಂವಾದದಲ್ಲಿ ಸಾಲು ಸಾಲು ಸಮಸ್ಯೆಗಳು ತೂರಿ ಬಂದವು.
ಶಾಲೆಯ ಎರಡು ಕೊಠಡಿಗಳಿಗೆ ವಿದ್ಯುತ್ ಇಲ್ಲದಿರುವುದು ಮತ್ತು ಶಾಲಾ ಕಟ್ಟಡದ ಮೇಲೆ ವಿದ್ಯುತ್ ತಂತಿ ಹಾದು ಹೋಗಿರುವ ಸಮಸ್ಯೆ ತಿಳಿದು ನಾಳೆ ಒಳಗಾಗಿ ವಿದ್ಯುತ್ ತಂತಿ ತೆರವುಗೊಳಿಸಲಾಗುವುದು. ಶಾಲಾ ಕೊಠಡಿಗೆ ವಿದ್ಯುತ್ ಕಲ್ಪಿಸಿ, ಖಾಸಗಿ ಸಹಭಾಗಿತ್ವದಲ್ಲಿ ಸುಸಜ್ಜಿತ ಪ್ರಯೋಗಾಲಯವನ್ನು ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಇಂಗ್ಲೀಷ್, ಹಿಂದಿ ಶಿಕ್ಷಕರನ್ನು ನೇಮಿಸುವ ಕುರಿತು ಚರ್ಚಿಸಲಿದ್ದು, ಕುಡಿಯುವ ನೀರಿನಲ್ಲಿ ಪ್ಲೋರೈಡ್ ಅಂಶವಿರುವ ಸಮಸ್ಯೆಗೆ ಕಿರುಯೋಜನೆಯನ್ನು ರೂಪಿಸಲಾಗುವುದು. ಜೊತೆಗೆ ಇಲ್ಲಿನ ವಿದ್ಯಾರ್ಥಿಗಳು 1ನೇ ತರಗತಿಯಿಂದ ಕನ್ನಡ ಮಾಧ್ಯಮ ಶಾಲೆ ಪ್ರಾರಂಭಿಸಬೇಕೆಂಬ ಬೇಡಿಕೆಯನ್ನು ಪ್ರಥಮ ಆದ್ಯತೆಗಾಗಿ ತೆಗೆದುಕೊಂಡು ಕನ್ನಡ ಮಾಧ್ಯಮ ಶಾಲೆ ಪ್ರಾರಂಭಿಸುವುದಾಗಿ ಘೋಷಿಸಿದರು.
ಸಾರಿಗೆ ದರ ಕಡಿತ, ಕೃಷಿ ಅದಾಲತ್, ಪಾಲಾರ್-ಹೊಗೆನಕಲ್ ಸಾರಿಗೆ ಬಸ್ ದರವನ್ನು 10 ದಿನದೊಳಗೆ ಕಡಿತಗೊಳ್ಳಲಿದ್ದು, ಕೃಷಿಗೆ ಸಂಬಂಧಿಸಿದ ಮಾಹಿತಿಗಳು, ಬೆಳೆ ವಿವರಗಳು ಗೋಪಿನಾಥಂ ಜನರಿಗೆ ತಲುಪದಿರುವುದರಿಂದ ಇನ್ನು 7 ದಿನದಲ್ಲಿ ಗೋಪಿನಾಥಂ ಹಳ್ಳಿಯಲ್ಲಿ ಕೃಷಿ ಅದಾಲತ್ ನಡೆಸಲಾಗುವುದು. ಗೋಪಿನಾಥಂನಲ್ಲಿ ಪಿಯು ಕಾಲೇಜು ತೆರೆಯಬೇಕೆಂಬ ಒತ್ತಾಯಕ್ಕೆ ಗೋಪಿನಾಥಂನಲ್ಲಿ ಕೌಶಲ್ಯಾಧಾರಿತ ಶಿಕ್ಷಣ ನೀಡಲು ಚಿಂತಿಸಲಾಗುವುದು ಎಂದು ತಿಳಿಸಿದರು.