ಚಾಮರಾಜನಗರ: ವೇತನ ಹಾಗೂ ವಿವಿಧ ಸೌಲಭ್ಯಗಳಿಗಾಗಿ ಆಗ್ರಹಿಸಿ ಏಜೆನ್ಸಿ ವಿರುದ್ಧ ಡಯಾಲಿಸಿಟ್ ಸಿಬ್ಬಂದಿ ಮುಷ್ಕರ ನಡೆಸಿರುವ ಪರಿಣಾಮ ಸುಮಾರು 27ಕ್ಕೂ ಹೆಚ್ಚು ಮಂದಿ ರೋಗಿಗಳು ಡಯಾಲಿಸಿಸ್ ಮಾಡಿಸಿಕೊಳ್ಳಲಾಗದೇ ಪರದಾಡಿದ ಘಟನೆ ನಡೆದಿದೆ. ಜಿಲ್ಲಾಸ್ಪತ್ರೆಯ ಹಳೇ ಕಟ್ಟಡದ ಮುಂಭಾಗ ಡಯಾಲಿಸಿಸ್ ಮಾಡಿಸಿಕೊಳ್ಳಲು ಆಗಮಿಸಿದ್ದ ರೋಗಿಗಳು ಮಧ್ಯಾಹ್ನದವರೆಗೂ ಕಾದು ಕುಳಿತರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಆಕ್ರೋಶಗೊಂಡ ರೋಗಿಗಳು ಜಿಲ್ಲಾಡಳಿತ ಭವನ ಆವರಣದಲ್ಲಿ ಧರಣಿ ನಡೆಸಿ ಆಕ್ರೋಶ ಹೊರಹಾಕಿದರು.
ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ಇಲ್ಲದೆ ರೋಗಿಗಳ ಪರದಾಟ . ಈ ಹಿಂದೆ ಇದ್ದ ಬಿ.ಆರ್.ಎಸ್. ಏಜೆನ್ಸಿ ಸೇವೆ ಉತ್ತಮವಾಗಿತ್ತು. ಈಗಿನ ಸಂಜೀವಿನಿ ಏಜೆನ್ಸಿಯವರು ದುಡ್ಡು ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದಾರೆ ಎಂದು ರೋಗಿಗಳು ಕಿಡಿಕಾರಿದ್ದಾರೆ. 4 ದಿನಗಳಿಗೊಮ್ಮೆ ತಾವು ಡಯಾಲಿಸಿಸ್ ಮಾಡಿಸಿಕೊಳ್ಳಬೇಕಿದ್ದು, ಸಿಬ್ಬಂದಿ ಈ ರೀತಿ ಮುಷ್ಕರ ಹೂಡಿ ರೋಗಿಗಳ ಪ್ರಾಣದೊಟ್ಟಿಗೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸಿಸ್ ರೋಗಿಗಳಿಗೆ ಸರಿಯಾದ ಚಿಕಿತ್ಸೆಯನ್ನು ನೀಡಲಾಗುತ್ತಿಲ್ಲ. ನಾವು ಸ್ವಂತ ಹಣದಿಂದ ಇಂಜೆಕ್ಷನ್ ತೆಗೆದುಕೊಂಡು ಹೋದರೂ, ಇಷ್ಟೆಲ್ಲಾ ಮಾಡಿಯೂ ಸಿಬ್ಬಂದಿ ಮುಷ್ಕರದಿಂದ ಪರದಾಡುತ್ತಿದ್ದೇವೆ ಎಂದು ರೋಗಿಗಳು ಅಳಲು ತೋಡಿಕೊಂಡಿದ್ದಾರೆ.
ಡಿಎಚ್ಒ ಸಮಜಾಯಿಷಿ : ಈ ಸಂಬಂಧ ಪ್ರತಿಭಟನಾಕಾರರ ಒಟ್ಟಿಗೆ ಡಿಎಚ್ಒ ಡಾ.ವಿಶ್ವೇಶ್ವರಯ್ಯ ಮಾತನಾಡಿ, ಸಂಜೀವಿನಿ ಏಜೆನ್ಸಿ ವಿರುದ್ಧ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸಿಬ್ಬಂದಿ ಮೈಸೂರಿಗೆ ತೆರಳಿದ್ದಾರೆ. ಮಧ್ಯಾಹ್ನ 3-4 ರ ವೇಳೆಗೆ ಬರಲಿದ್ದು, ಡಯಾಲಿಸಿಸ್ ಮಾಡಲಿದ್ದಾರೆ. ಇಲ್ಲವೇ ನಾಳೆಯಾದರೂ ಮಾಡುತ್ತಾರೆ ಎಂದು ಸಮಜಾಯಿಷಿ ಕೊಟ್ಟಿದ್ದಾರೆ. ಡಿಎಚ್ಒ ಮಾತಿಗೆ ಬಗ್ಗದ ರೋಗಿಗಳು ತಮಗೇ ಡಯಾಲಿಸಿಸ್ ಮಾಡುವ ತನಕ ತಾವು ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ, ಕೆಲವರು ಆಸ್ಪತ್ರೆಯಲ್ಲೇ ಉಳಿದಿದ್ದಾರೆ.
ಇದನ್ನೂ ಓದಿ :ಮತ್ತಷ್ಟು ಸ್ಮಾರ್ಟಾಯ್ತು ಊರು.. ಈ ಗ್ರಾಮದಲ್ಲಿ ಡಿಜಿಟಲ್ ಗ್ರಂಥಾಲಯದ ಕಮಾಲ್