ಚಾಮರಾಜನಗರ: ಕಾಡುಗಳ್ಳ, ನರಹಂತಕನ ಊರಾದ ಹನೂರು ತಾಲೂಕಿನ ಗೋಪಿನಾಥಂ ಗ್ರಾಮದ ಜನರು ವೀರಪ್ಪನ್ ವಂಚನೆಗೆ ಬಲಿಯಾದ ಅರಣ್ಯಾಧಿಕಾರಿ ಪಿ.ಶ್ರೀನಿವಾಸ್ ಅವರ ಪುತ್ಥಳಿ ನಿರ್ಮಿಸಿ ಅಭಿಮಾನ ಮೆರೆದಿದ್ದಾರೆ. ಈ ಹಿಂದೆ ಚಾಮರಾಜನಗರ ಸಿಸಿಎಫ್ ಆಗಿದ್ದ ಮನೋಜ್ ಕುಮಾರ್ ಗೋಪಿನಾಥಂಗೆ ಭೇಟಿ ನೀಡಿದ ಸಂದರ್ಭ ಗ್ರಾಮದ ಅಭಿವೃದ್ಧಿ ಮತ್ತು ದೇವಾಲಯ ಅಭಿವೃದ್ಧಿಗೆಂದು 2 ಲಕ್ಷ ರೂ. ನೀಡಲು ಬಂದಿದ್ದಾರೆ. ಆಗ ಗ್ರಾಮಸ್ಥರು ನಮಗೆ ಹಣ ಬೇಡ, ಡಿಎಫ್ಒ ಪಿ.ಶ್ರೀನಿವಾಸ್ ಅವರ ಪುತ್ಥಳಿ ಮಾಡಿಸಿಕೊಡಿ ಎಂದು ಮನವಿ ಮಾಡಿದ್ದಾರೆ.
ಗ್ರಾಮಸ್ಥರ ಒತ್ತಾಸೆಯಂತೆ ಗೋಪಿನಾಥಂನ ಮಾರಿಯಮ್ಮ ದೇವಾಲಯ ಮುಂಭಾಗದಲ್ಲಿ ಪ್ರತಿಷ್ಠಾಪಿಸಲು ಪಿ.ಶ್ರೀನಿವಾಸ್ ಅವರ ಎರಡು ಅಡಿಯ ಕಂಚಿನ ಪುತ್ಥಳಿ ಗ್ರಾಮಕ್ಕೆ ಬಂದಿದೆ. ಇದನ್ನು ಪ್ರತಿಷ್ಠಾಪಿಸಲು ದೇಗುಲ ಮುಂಭಾಗದಲ್ಲಿ ಮಂಟಪದ ಕಾರ್ಯ ನಡೆಯುತ್ತಿದೆ. ಮುಂಬರುವ ಅರಣ್ಯ ಹುತಾತ್ಮರ ದಿನ ಪುತ್ಥಳಿಯನ್ನು ಅನಾವರಣಗೊಳಿಸಲಾಗುವುದು ಎಂದು ಕಾವೇರಿ ವನ್ಯಜೀವಿಧಾಮದ ಎಸಿಎಫ್ ಅಂಕರಾಜು ತಿಳಿಸಿದರು.