ಚಾಮರಾಜನಗರ:ಜಗತ್ತಿನೆಲ್ಲೆಡೆ ಮಹಾತ್ಮಾ ಗಾಂಧಿ ಹೆಸರಿನ ರಸ್ತೆಗಳು, ಪ್ರತಿಮೆಗಳು ಇರುವಂತೆ ರಾಜ್ಯದ ವಿವಿಧ ಮೂಲೆಗಳಲ್ಲಿ ವರನಟ ಡಾ.ರಾಜ್ ಕುಮಾರ್ ಅವರ ಪುತ್ಥಳಿ, ರಾಜ್ ಹೆಸರಿನ ರಸ್ತೆ, ಉದ್ಯಾನವನಗಳಿವೆ. ಆದರೆ, ಈ ಭಾಗ್ಯ ರಾಜ್ ಹುಟ್ಟೂರಿಗೆ ಮಾತ್ರ ಒದಗಿಬಂದಿಲ್ಲ.
ಹೌದು, ಇದು ವಿಪರ್ಯಾಸವಾದರೂ ಸತ್ಯ. ದೊಡ್ಡಗಾಜನೂರು ಗ್ರಾಮದ ಮುಂಭಾಗ ಸ್ಥಾಪಿಸಲು ಉದ್ದೇಶಿಸಿದ್ದ ರಾಜ್ ಪುತ್ಥಳಿ ಕಾಮಗಾರಿ ನೆನೆಗುದಿಗೆ ಬಿದ್ದಿರುವುದು ಅಭಿಮಾನಿಗಳಿಗೆ ನಿರಾಸೆ ಉಂಟು ಮಾಡಿದೆ. ಊರಿನ ಮುಂಭಾಗವೇ ಡಾ.ರಾಜ್ ಕುಮಾರ್ ವೃತ್ತ ಎಂದು ಪುತ್ಥಳಿ ಕಾಮಗಾರಿಗೆ ಚಾಲನೆ ದೊರೆತು ಆರೇಳು ವರ್ಷವಾಗಿದ್ದರೂ ಇನ್ನೂ ಮುಗಿದಿಲ್ಲ. ರಾಜ್ ಹುಟ್ಟಿದ ಮನೆ ಸಹ ದುಸ್ಥಿತಿಗೆ ತಲುಪಿದೆ.
ಇನ್ನು, ರಾಷ್ಟ್ರಕವಿ ಕುವೆಂಪು, ಖ್ಯಾತ ಕಾದಂಬರಿಕಾರ ಆರ್.ಕೆ. ನಾರಾಯಣ್ ನಿವಾಸದ ರೀತಿ ರಾಜ್ಕುಮಾರ್ ನಿವಾಸವನ್ನು ಸ್ಮಾರಕವಾಗಿಸಬೇಕೆಂಬ ಬೇಡಿಕೆ ಈಡೇರುತ್ತಿಲ್ಲ. ಆದರೆ ಅಭಿಮಾನಿ ದೇವರುಗಳು ಪ್ರತಿನಿತ್ಯ ರಾಜ್ ಮನೆಗೆ ಭೇಟಿ ನೀಡುತ್ತಾರೆ. ಅಣ್ಣಾವ್ರು ಓಡಾಡಿದ್ದ ಸ್ಥಳಗಳಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ ಎನ್ನುತ್ತಾರೆ ರಾಜ್ ಕುಮಾರ್ ಸಂಬಂಧಿ ಗೋಪಾಲ್.