ಚಾಮರಾಜನಗರ: ಸತತ ನಾಲ್ಕು ದಿನಗಳಿಂದ ಕೊರೊನಾ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆಯೇ ಹೆಚ್ಚಿದ್ದು, ಶುಕ್ರವಾರ 471 ಹೊಸ ಕೋವಿಡ್ ಕೇಸ್ ಪತ್ತೆಯಾದರೇ 533 ಮಂದಿ ಮಹಾಮಾರಿಯಿಂದ ಗುಣಮುಖರಾಗಿದ್ದಾರೆ.
4 ಮಂದಿ ಸಾವು: ಕೊರೊನಾ ಸೋಂಕಿತರ ಸಂಖ್ಯೆ ಇಳಿಕೆ ಕಂಡಂತೆ ಸಾವಿನ ಪ್ರಮಾಣವು ಕಡಿಮೆಯಾಗಿದ್ದು, ನಾಲ್ವರು ಸೋಂಕಿತರು ನಿನ್ನೆ ಮೃತಪಟ್ಟಿದ್ದಾರೆ. ಕಳೆದ 3 ದಿನಗಳಿಂದ 10,9,8 ರ ಸಂಖ್ಯೆಯಲ್ಲಿದ್ದ ಸಾವಿನ ಪ್ರಮಾಣ ನಾಲ್ಕಕ್ಕೆ ಇಳಿದಿದೆ. ಕೊರೊನಾ ಸೋಂಕಿತರ ಸಾವಿನ ಸಂಖ್ಯೆ 332ಕ್ಕೆ ಏರಿಕೆಯಾಗಿದೆ. ಶುಕ್ರವಾರ 647 ಮಂದಿಗೆ ಲಸಿಕೆ ನೀಡಲಾಗಿದೆ.
ಚಾಮರಾಜನಗರ ತಾಲೂಕಿನಲ್ಲಿ ಟಾಸ್ಕ್ ಫೋರ್ಸ್ ಸಭೆ :
ಚಾಮರಾಜನಗರ ತಾಲೂಕಿನಲ್ಲಿ ಟಾಸ್ಕ್ ಫೋರ್ಸ್ ಸಭೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆಯಲ್ಲಿ ಚಾಮರಾಜನಗರ ತಾಲೂಕಿನ ಬಿಸಿಲವಾಡಿ ಗ್ರಾಮದಲ್ಲಿ ಕೊರೊನಾ ತಡೆ ಟಾಸ್ಕ್ ಫೋರ್ಸ್ ಸಭೆ ನಡೆದಿದ್ದು, ಸೋಂಕು ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಬೇಕೆಂದು ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಗ್ರಾ.ಪಂ ವ್ಯಾಪ್ತಿಯಲ್ಲಿ ಕೋವಿಡ್ ಕೇಸ್ ಹೆಚ್ಚಾಗುತ್ತಿದ್ದು, ಪಂಚಾಯತ್ ವ್ಯಾಪ್ತಿಯಲ್ಲಿ ಕೊರೊನಾದಿಂದ ಮೂವರು ಬಲಿಯಾಗಿದ್ದಾರೆ. 100ಕ್ಕೂ ಹೆಚ್ಚು ಪ್ರಕರಣಗಳಿರುವುದು ಕಳವಳಕಾರಿಯಾಗಿದೆ. ಆಶಾ ಕಾರ್ಯಕರ್ತೆಯರು, ಪಿಡಿಒ ಕೂಡಲೇ ಹೋಂ ಕ್ವಾರಂಟೈನ್ ಆಗಿರುವವರನ್ನು ಕೋವಿಡ್ ಕೇರ್ ಸೆಂಟರ್ಗೆ ಕಳುಹಿಸಬೇಕೆಂದು ಹೇಳಿದರು.
ಯಾವುದೇ ಕಾರಣಕ್ಕೂ ಸೋಂಕಿತರು ಆತಂಕಕ್ಕೆ ಒಳಗಾಗದಂತೆ ಆಶಾ ಕಾರ್ಯಕರ್ತೆಯರು ಧೈರ್ಯ ತುಂಬಬೇಕು, ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳುವಂತೆ ಅರಿವು ಮೂಡಿಸಬೇಕು ಎಂದರು.
ಇದಾದ ಬಳಿಕ, ಕಳೆದ ಮೂರು ದಿನಗಳ ಹಿಂದೆ ಕೋವಿಡ್ ನಿಂದ ಮೃತಪಟ್ಟಿದ್ದ ವ್ಯಕ್ತಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಮೃತ ಸೋಂಕಿತನ ಮಗಳಿಗೆ ಸಹಾಯಧನದ ಚೆಕ್ ವಿತರಿಸಿದರು.