ಚಾಮರಾಜನಗರ: ಜಿಲ್ಲಾಡಳಿತ ಹಾಗೂ ಮೈಸೂರು ದಸರಾ ಮಹೋತ್ಸವ ಸಮಿತಿ ಸಹಯೋಗದೊಂದಿಗೆ ಅಕ್ಟೋಬರ್ 7 ರಿಂದ 10 ರವರೆಗೆ ಚಾಮರಾಜನಗರ ಜಿಲ್ಲಾ ದಸರಾ ನಡೆಯಲಿದ್ದು, ಎರಡು ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಅಕ್ಟೋಬರ್ 7ರ ಬೆಳಗ್ಗೆ 10.15ಕ್ಕೆ ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯದೊಂದಿಗೆ ಚಾಮರಾಜನಗರ ದಸರಾ ಮಹೋತ್ಸವಕ್ಕೆ ಸಚಿವ ಎಸ್. ಟಿ.ಸೋಮಶೇಖರ್ ಚಾಲನೆ ನೀಡಲಿದ್ದಾರೆ. ಸಂಜೆ 5.30ಕ್ಕೆ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ದಸರಾ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.
ಚಾಮರಾಜೇಶ್ವರ ದೇವಾಲಯದ ಆವರಣದ ಬಳಿ ನಿರ್ಮಿಸಲಾಗಿರುವ ಮುಖ್ಯ ವೇದಿಕೆಯಲ್ಲಿ ಸಂಜೆ 4 ರಿಂದ ರಾತ್ರಿ 9.45 ರವರೆಗೆ ಹಾಗೂ ಜಿಲ್ಲಾಡಳಿತ ಭನವದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ಮಧ್ಯಾಹ್ನ 2 ರಿಂದ ರಾತ್ರಿ 9.50 ಗಂಟೆಯವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಇದನ್ನೂ ಓದಿ: ರಾಷ್ಟ್ರಪತಿ ಭೇಟಿ ಹಿನ್ನೆಲೆ ಹಳೆ ರಸ್ತೆಗೆ ಹೊಸ ಬಣ್ಣ..PWD ವಿರುದ್ಧ ಸಾರ್ವಜನಿಕರ ಆಕ್ರೋಶ
ಸಿ.ಎಂ. ನರಸಿಂಹಮೂರ್ತಿ ತಂಡದಿಂದ ಜಾನಪದ ಗಾಯನ, ಮಜಾ ಭಾರತ ಕಲಾವಿದರಿಂದ ಹಾಸ್ಯ ಸಂಜೆ, ಉಮ್ಮತ್ತೂರು ಬಸವರಾಜು ಅವರಿಂದ ಮಿಮಿಕ್ರಿ, ಆದಿವಾಸಿ ಕಲಾವಿದರಿಂದ ನೃತ್ಯ ಸೇರಿದಂತೆ ಈ ಬಾರಿ ಸ್ಥಳೀಯ ಕಲಾವಿದರಿಗಷ್ಟೇ ಪ್ರಾತಿನಿಧ್ಯ ಕೊಟ್ಟು ಆಕರ್ಷಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.