ಚಾಮರಾಜನಗರ: ವಿವಿಧ ಕಾರಣಗಳಿಂದ ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಿಗೂ ಕೊರೊನಾ ಬಿಸಿ ತಟ್ಟಿದೆ. ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳು ಸಂಬಂಧಿಕರು, ಸ್ನೇಹಿತರಿಗೆ ಸಂದರ್ಶನ ಮಾಡಲು ನಿರ್ಬಂಧ ವಿಧಿಸಲಾಗಿದೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿರುವ ಜಿಲ್ಲಾ ಕಾರಾಗೃಹದ ಸೂಪರಿಂಡೆಂಟ್ ವಿನಯ್ ಅವರು, ಜಿಲ್ಲಾ ಕಾರಾಗೃಹದಲ್ಲಿ ಒಟ್ಟು 118 ಕೈದಿಗಳಿದ್ದು, ಕೆಮ್ಮು, ನೆಗಡಿ, ಶೀತ ಇರುವವರಿಗೆ ಮುಂಜಾಗೃತ ಕ್ರಮವಾಗಿ ಆರೋಗ್ಯ ತಪಾಸಣೆ ನಡೆಸಲಾಗಿದೆ. ಪ್ರತಿಯೊಬ್ಬರಿಗೂ ಮಾಸ್ಕ್ ಕೂಡ ವಿತರಿಸಿದ್ದು, ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರದಂತೆ ಎಚ್ಚರ ವಹಿಸಲಾಗಿದೆ. ಬಂಧಿಖಾನೆಯ ಸಿಬ್ಬಂದಿಗೂ ಮಾಸ್ಕ್ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದ್ರು.
ಕೈದಿಗಳ ಭೇಟಿಗೆ ತಡೆಹಿಡಿದ ಚಾಮರಾಜನಗರ ಜಿಲ್ಲಾ ಕಾರಗೃಹ ಹೊಸದಾಗಿ ಬರುವ ವಿಚಾರಣಾ ಕೈದಿಗಳನ್ನು ಪ್ರತ್ಯೇಕವಾಗಿ ಇರಿಸಲಾಗುತ್ತಿದ್ದು, ಆರೋಗ್ಯ ಇಲಾಖೆ ಕೊರೊನಾ ಲಕ್ಷಣಗಳಿಲ್ಲ ಎಂದು ಖಚಿತಪಡಿಸಿದ ಬಳಿಕvಷ್ಟೇ ಅವರು ಇತರರೊಂದಿಗೆ ಬೆರೆಯಲು ಬಿಡಲಾಗುತ್ತಿದೆ. ಮುನ್ನೆಚ್ಚರಿಕೆಯಿಂದಷ್ಟೇ ಈ ಕ್ರಮ ಕೈಗೊಳ್ಳಲಾಗಿದ್ದು, ಕೊರೊನಾ ಆತಂಕ ಕಡಿಮೆಯಾದ ಬಳಿಕ ಎಂದಿನಂತೆ ಸಂದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಹಕ್ಕಿಜ್ವರದ ಭೀತಿಯೂ ಇರುವುದರಿಂದ ಆದಷ್ಟು ಸಂಬಂಧಿಕರು ಮಾಂಸಾಹಾರಗಳನ್ನು ಕೊಡುವುದು ಬೇಡವೆಂದು ಕೆಲವರಿಗೆ ತಿಳಿಸಿದ್ದೇವೆ. ಕೈದಿಗಳ ಆರೋಗ್ಯದ ಮೇಲೆ ಯಾವುದೇ ಅಡ್ಡ ಪರಿಣಾಮಗಳು ಬೀರಬಾರದೆಂದು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಕೋರ್ಟ್ ಕಲಾಪ, ಸರ್ಕಾರಿ ಕಚೇರಿ ಬಳಿಕ ಕೈದಿಗಳಿಗೂ ಕೊರೊನಾ ಬಿಸಿ ತಟ್ಟಿದ್ದು, ಕೊರೊನಾ ವೈರಸ್ ಆತಂಕ ಕಡಿಮೆಯಾಗುವವರೆಗೆ ಕೈದಿಗಳಿಗೆ ಸಂದರ್ಶನದ ಭಾಗ್ಯವಂತೂ ಇರಲ್ಲ.