ಚಾಮರಾಜನಗರ :ಲೋಕಶಿಕ್ಷಣ ನಿರ್ದೇಶನಾಲಯದಿಂದ ಸಾಕ್ಷರತಾ ತರಬೇತಿ ಪಡೆದ ಅನಕ್ಷರಸ್ಥರಿಗೆ, ಚಾಮರಾಜನಗರದ 130 ಗ್ರಾಪಂ ವ್ಯಾಪ್ತಿಗಳಲ್ಲಿ ಇಂದು 30 ಸಾವಿರ ಮಂದಿಗೆ ಪರೀಕ್ಷೆ ನಡೆಯಬೇಕಿತ್ತು. ಆದರೆ, ಹಲವೆಡೆ ಪ್ರಶ್ನೆ ಪತ್ರಿಕೆಗಳೇ ತಲುಪಿಲ್ಲ. ಇನ್ನು, ಪ್ರಶ್ನೆಪತ್ರಿಕೆ ಬಂದ ಕಡೆ ವಯಸ್ಕರು ಬರೆಯಬೇಕಾದ ಪರೀಕ್ಷೆಯನ್ನು ಮಕ್ಕಳು, ಬಿಸಿಯೂಟದ ಸಿಬ್ಬಂದಿ ಬರೆಯುವ ಮೂಲಕ ಭಾರೀ ಗೋಲ್‌ಮಾಲನ್ನೇ ಮಾಡಿದ್ದಾರೆ.
ಪಡ್ನಾ-ಲಿಖ್ನಾ ಅಭಿಯಾನದಡಿಯಲ್ಲಿ ಪರೀಕ್ಷೆ.. ಪಡ್ನಾ-ಲಿಖ್ನಾ ಅಭಿಯಾನದ ಪ್ರೇರಕರಾದ ಚಾಮರಾಜನಗರ ತಾಲೂಕಿನ ಹರದನಹಳ್ಳಿಯ ಪುಟ್ಟರಾಜು ಪ್ರತಿಕ್ರಿಯಿಸಿ, ಕೂಲಿ ಕೆಲಸ ಬದಿಗಿಟ್ಟು 70ಕ್ಕೂ ಹೆಚ್ಚು ಮಂದಿ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರಗಳಿಗೆ ಬಂದಿದ್ದರು. ಆದ್ರೆ, 3 ಗಂಟೆಯಾದ್ರೂ ಪ್ರಶ್ನೆ ಪತ್ರಿಕೆ ಬಾರದ ಕಾರಣ ಅಧಿಕಾರಿಗಳ ವಿರುದ್ಧ ಕಿಡಿಕಾರಿ ಮನೆದಾರಿ ಹಿಡಿದರು. ಅವರಿಗೆ ಇಂದಿನ ಕೂಲಿಯೂ ಇಲ್ಲದಂತಾಯ್ತು, ಇತ್ತ ಪರೀಕ್ಷೆಯೂ ಇಲ್ಲ ಎಂಬಂತಾಗಿದೆ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಒಂದೆಡೆ ಅಧಿಕಾರಿ ಭೇಟಿ-ಮತ್ತೊಂದೆಡೆ ಗೋಲ್‌ಮಾಲ್ :ಪಡ್ನಾ-ಲಿಖ್ನಾ ಅಭಿಯಾನ ಕಲಿಕಾರ್ಥಿಗಳಿಗೆ ಪರೀಕ್ಷೆ ಇರುವ ಹಿನ್ನೆಲೆ ಸಾಕ್ಷಾರ್ ಭಾರತ್ನ ರಾಜ್ಯ ನಿರ್ದೇಶಕಿ ಸುಷ್ಮಾ ಗೊಡ್ಬೋಲೆ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಯಳಂದೂರಿನ ಗೌಡಹಳ್ಳಿ ಗ್ರಾಮದ ಶಾಲೆಯಲ್ಲಿ ಮಕ್ಕಳು ಪರೀಕ್ಷೆ ಬರೆದಿದ್ದು ಕಂಡು ಬಂತು. ಅಲ್ಲದೇ ಚಾಮರಾಜನಗರ ತಾಲೂಕಿನ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ಬಾರದಿರುವ ವಿಷಯ ಅವರಿಗೆ ತಿಳಿದೇ ಇರಲಿಲ್ಲ.
ಇದನ್ನೂ ಓದಿ:EGO ಬಿಟ್ಟು ಎಕ್ಸಾಂಗೆ ಹಾಜರಾಗಿ.. ಗೈರಾದವ್ರಿಗೆ ಮರು ಪರೀಕ್ಷೆ ಇಲ್ಲ: ಶಿಕ್ಷಣ ಸಚಿವ ಬಿ.ಸಿ ನಾಗೇಶ್
ಇಂದು ಬೆಳಗ್ಗೆಯಿಂದ ಮೂರು ಅವಧಿಯಲ್ಲಿ ನಡೆಯಬೇಕಿದ್ದ ಪರೀಕ್ಷೆಯಲ್ಲಿ ಸಾವಿರಾರು ಮಂದಿ ನೋಂದಾಯಿಸಿಕೊಂಡಿದ್ದರು. ಆದ್ರೆ, ಪರೀಕ್ಷೆ ಬರೆದವರು ಬೆರಳಣಿಕೆಯಷ್ಟು ಮಂದಿ ಮಾತ್ರ. ಇನ್ನು ಈ ಬಗ್ಗೆ ಡಯಟ್ ಪ್ರಾಂಶುಪಾಲರಾದ ಪಾಂಡು ಪ್ರತಿಕ್ರಿಯಿಸಿ, ಪ್ರಶ್ನೆ ಪತ್ರಿಕೆ ಬಂದಿದ್ದು ತಡವಾಯಿತು. ಆದರೆ, ಎಲ್ಲಾ ಕಡೆ ವಿತರಿಸಲಾಗಿದೆ. ಯಳಂದೂರು ತಾಲೂಕಿನಲ್ಲಿ ಮಕ್ಕಳು ಪರೀಕ್ಷೆ ಬರೆದಿರುವ ಬಗ್ಗೆ ಮಾಹಿತಿ ಇಲ್ಲ. ನೋಡಲ್ ಅಧಿಕಾರಿಯಿಂದ ವರದಿ ತಯಾರಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.