ಚಾಮರಾಜನಗರ:ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಮತದಾರ ಪ್ರಭುಗಳ ಜೊತೆಗೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಕೂಡ ಮತ ಚಲಾಯಿಸುತ್ತಿದ್ದಾರೆ. ಆದರೆ ಕೆಲವರು ಸ್ಪರ್ಧಿಸಿರುವ ಕ್ಷೇತ್ರದಲ್ಲಿ ತಮ್ಮ ವೋಟನ್ನು ತಮಗೇ ಹಾಕಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕಾರಣ ಅವರು ಸ್ಪರ್ಧಿಸಿರುವ ಕ್ಷೇತ್ರ ಮತ್ತೊಂದೆಡೆ ಇದೆ. ಹೀಗಾಗಿ ಮತ್ತೊಬ್ಬ ಅಭ್ಯರ್ಥಿಗೆ ವೋಟ್ ಹಾಕಬೇಕಿದೆ.
ತಮ್ಮದೇ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ತಮ್ಮ ಓಟನ್ನು ತಮಗೇ ಹಾಕಿಕೊಳ್ಳುತ್ತಿದ್ದಾರೆ. ಆದರೆ ಈ ಅದೃಷ್ಟ ತಮ್ಮ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವವರ ಪಾಲಿಗೆ ಇಲ್ಲದಂತಾಗಿದೆ. ಚುನಾವಣೆಗೆ ಸ್ಪರ್ಧಿಸುವ ಕ್ಷೇತ್ರ ಬೇರೆಯಾಗಿದ್ದು, ಮತ್ತೊಂದೆಡೆ ವಿಳಾಸ, ಹುಟ್ಟೂರು ಬೇರೆಯಾದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಬೇರೆ ಅಭ್ಯರ್ಥಿಗಳಿಗೆ ಮತ ಹಾಕಿದ್ದಾರೆ.
ನಂಜನಗೂಡು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದರ್ಶನ್ ಅವರು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಮಾಡಿದ್ದಾರೆ. ಚಾಮರಾಜನಗರ ಶಾಸಕ, ಕೈ ಅಭ್ಯರ್ಥಿ ಸಿ.ಪುಟ್ಟರಂಗಶೆಟ್ಟಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವೋಟ್ ಹಾಕಿದ್ದಾರೆ. ಕೊಳ್ಳೇಗಾಲದಲ್ಲಿ ತೀವ್ರ ಪೈಪೋಟಿ ಕೊಡುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಅವರು ಚಾಮರಾಜನಗರ ಕ್ಷೇತ್ರ ಆಲೂರು ಗ್ರಾಮದಲ್ಲಿ ಮತ ಚಲಾಯಿಸಿದ್ದಾರೆ.
ಕೊಳ್ಳೇಗಾಲದ ಜೆಡಿಎಸ್ ಅಭ್ಯರ್ಥಿ ಬಿ.ಪುಟ್ಟಸ್ವಾಮಿ ವರುಣ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾನ ಮಾಡಿದ್ದಾರೆ. ಚಾಮರಾಜನಗರ ಪಕ್ಷೇತರ ಅಭ್ಯರ್ಥಿ ವಾಟಾಳ್ ನಾಗರಾಜ್ ಬೆಂಗಳೂರಲ್ಲಿ ಮತ ಚಲಾಯಿಸಿದ್ದಾರೆ. ಹನೂರು ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಬೆಂಗಳೂರಲ್ಲಿ ವೋಟ್ ಹಾಕಿದ್ದಾರೆ.
ಇದನ್ನೂ ಓದಿ:ತೋರಿಸಿದ ಚಿಹ್ನೆಗೆ ಅಧಿಕಾರಿಗಳು ಮತ ಹಾಕಿಲ್ಲ ಎಂದು ಆರೋಪಿಸಿ ಧರಣಿ ಕುಳಿತ 85ರ ವೃದ್ಧೆ!