ಚಾಮರಾಜನಗರ: ಪುನೀತ್ ರಾಜ್‍ಕುಮಾರ್ ಸ್ಮರಣಾರ್ಥ ನಟ ಹಾಗೂ ಅಪ್ಪು ಸೋದರ ಸಂಬಂಧಿ ವಿಜಯ್ ರಾಘವೇಂದ್ರ ಇಂದು ಚಾಮರಾಜನಗರ ಮೆಡಿಕಲ್ ಕಾಲೇಜಿನ ರಕ್ತನಿಧಿ ಕೇಂದ್ರದಲ್ಲಿ ರಕ್ತದಾನ ಮಾಡಿದರು.
ರೋಟರಿ ಸಂಸ್ಥೆ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ, ರೋಟರಿ ಸಂಸ್ಥೆ ನೀಡಿರುವ ಅತ್ಯಾಧುನಿಕ ಉಪಕರಣಗಳಿಗೆ ಚಾಲನೆ ನೀಡಿ, ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ವಿಜಯ್ ರಾಘವೇಂದ್ರ ರಕ್ತದಾನ ಮಾಡಿದರು.
tribute to Puneeth Rajkumar:ಕಾರ್ಯಕ್ರಮದಲ್ಲಿ ಮಾತನಾಡಿದ ವಿಜಯ್ ರಾಘವೇಂದ್ರ, ರಕ್ತದಾನದ ಖುಷಿ, ಬೇರೊಂದು ಜೀವ ಉಳಿಸಿದ ಸಮಾಧಾನ ಈಗ ನನ್ನಲ್ಲಿಲ್ಲ. ಅಪ್ಪು ಸ್ಮರಣೆ ಕಾರ್ಯಕ್ರಮಗಳು ನಡೆಯುತ್ತಿರುವುದನ್ನು ಕಂಡಾಗ ಗಂಟಲು ಕಟ್ಟಿದಂತಾಗುತ್ತದೆ. ಅಪ್ಪು ಫೋಟೋ ನೋಡಲು ನನಗೆ ಧೈರ್ಯವೇ ಬರುತ್ತಿಲ್ಲ. ಅವರ ವ್ಯಕ್ತಿತ್ವ, ಪ್ರೀತಿ ಎಷ್ಟರ ಮಟ್ಟಿಗಿದೆ ಎಂದು ಅವರು ನಮ್ಮನ್ನು ಬಿಟ್ಟು ಹೋದ ದಿನ ಅರ್ಥವಾಗಿದೆ.
ಅವರ ಜೊತೆ ಬೆಳೆದಿರುವುದು, ಅವರ ಜೊತೆ ಕಲಿತಿರುವುದು ಈಗ ನಮಗೆ ಗೊತ್ತಾಗುತ್ತಿದೆ. ಅ.29 ರಿಂದ ನನ್ನನ್ನು ಸೇರಿದಂತೆ ಯಾರ ಕಣ್ಣಲ್ಲೂ ಆ ನೋವು ಮಾಸಿಲ್ಲ, ಅವರಿಲ್ಲ ಎಂಬ ಕೋಪ, ಅತೃಪ್ತಿ ಹೋಗಿಲ್ಲ. ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡುತ್ತಿದ್ದ ಅಪ್ಪು ಎಲ್ಲರನ್ನೂ ಬೆಳೆಸುತ್ತಿದ್ದರು. ಆದ್ರೀಗ ಅವರ ಸ್ಮರಣೆಯಲ್ಲಿ ಕೆಲಸ ಮಾಡಬೇಕಾಯ್ತಲ್ಲ ಎಂಬ ನೋವು ಕಾಡುತ್ತಿದೆ ಎಂದು ಬೇಸರ ಹೊರಹಾಕಿದರು.
ಅವರ ಅಭಿಮಾನಿಯಾಗಿರಲು ನನಗೆ ಹೆಮ್ಮೆ:
ಅಪ್ಪು ತೀರಿ ಹೋದಾಗ ಜನರು ತೋರಿದ ಪ್ರೀತಿ ಬಹಳ ದೊಡ್ಡದು. ಬೇರೆ ನಟರಿಗೆ ಆ ಮಟ್ಟಿಗೆ ತೋರಿಸಿದ್ದು, ನಾನೆಲ್ಲೂ ನೋಡಿಲ್ಲ. ಕೊನೆಯವರೆಗೂ ನಾನು ಅವರ ಅಭಿಮಾನಿಯಾಗಿ ಇರಲು ಬಯಸುತ್ತೇನೆ. ಅವರ ಅಭಿಮಾನಿ ಎಂದು ಎದೆತಟ್ಟಿ ಹೇಳಿಕೊಳ್ಳುತ್ತೇನೆ ಎಂದರು.