ಚಾಮರಾಜನಗರ: ಇಂದು 45 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 669ಕ್ಕೆ ಏರಿಕೆಯಾಗಿದೆ. ಅದರಲ್ಲೂ ಕೊಳ್ಳೇಗಾಲ, ಗುಂಡ್ಲುಪೇಟೆಯಲ್ಲಿ ಈವರೆಗೆ ಅತಿ ಹೆಚ್ಚು ಕೊರೊನಾ ಪ್ರಕರಣ ವರದಿಯಾಗಿವೆ.
ಇಂದು 11 ಮಂದಿ ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 417 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದ್ದು, ಐಸಿಯುನಲ್ಲಿ 7 ಮಂದಿಯಿದ್ದಾರೆ. 542 ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮೇಲೆ ನಿಗಾ ಇರಿಸಲಾಗಿದೆ. ಇಂದು ಪತ್ತೆಯಾದ ಸೋಂಕಿತರಲ್ಲಿ 60ವರ್ಷಕ್ಕೂ ಮೇಲ್ಪಟ್ಟ 6 ಮಂದಿ ಹಾಗೂ 5 ಮತ್ತು 8 ವರ್ಷದ ಇಬ್ಬರು ಮಕ್ಕಳಿದ್ದಾರೆ.
ಈವರೆಗೆ ಕೊಳ್ಳೇಗಾಲ 202, ಗುಂಡ್ಲುಪೇಟೆ 204, ಚಾಮರಾಜನಗರ 145, ಹನೂರಿನಲ್ಲಿ 36, ಯಳಂದೂರಿನಲ್ಲಿ 68 ಹಾಗೂ ಅಂತರ್ ಜಿಲ್ಲೆಯ 14 ಮಂದಿಗೆ ಸೋಂಕು ತಗುಲಿರುವುದು ವರದಿಯಾಗಿದೆ.
14 ಮಂದಿ ವಿರುದ್ಧ ಕೇಸ್ :ಗುಂಡ್ಲುಪೇಟೆ ತಾಲೂಕಿನಲ್ಲಿ ಹೋಂ ಕ್ವಾರಂಟೈನ್‌ನಲ್ಲಿರಬೇಕಾದ 14 ಮಂದಿ ಪದೇ-ಪದೆ ನಿಯಮ ಉಲ್ಲಂಘಿಸಿದ ಹಿನ್ನೆಲೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಹಶೀಲ್ದಾರ್ ನಂಜುಂಡಯ್ಯ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಹಿಂದೂಪರ ಸಂಘಟನೆಯಿಂದ ಅಂತ್ಯಸಂಸ್ಕಾರ :ಸಂತೇಮರಹಳ್ಳಿಯ 59 ವರ್ಷದ ವ್ಯಕ್ತಿಯೊಬ್ಬರು ಕೊರೊನಾದಿಂದ ಗುಣಮುಖರಾಗಿ 2 ದಿನಕ್ಕೆ ಮೃತಪಟ್ಟಿದ್ದರು. ಇವರ ಅಂತ್ಯಸಂಸ್ಕಾರವನ್ನು ಮಾಡಲು ಮನೆಯವರು ಹೆದರಿದ್ದರಿಂದ ಅಜಾದ್ ಹಿಂದೂ ಸೇನೆ ಹಾಗೂ ಬಿಜೆಪಿ ಸಂಯುಕ್ತವಾಗಿ ಗೌರವಯುತ ಮತ್ತು ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.