ಚಾಮರಾಜನಗರ: ಕರ್ನಾಟಕದ ಪ್ರಮುಖ ಪ್ರವಾಸಿ ತಾಣ ಹಾಗೂ ಚಿಕ್ಕ ತಿರುಪತಿ ಎಂದೇ ಹೆಸರಾದ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿ ರಂಗನಾಥ ದೇವಾಲಯದ ಹುಂಡಿ ಎಣಿಕೆ ಕಾರ್ಯ ಬುಧವಾರ ನಡೆಯಿತು. ಈ ಬಾರಿ ಭಕ್ತರು ಪತ್ರಗಳ ಮೂಲಕ ಭಗವಂತನಿಗೆ ಮೊರೆ ಇಟ್ಟಿದ್ದು, ಕಂಡುಬಂತು.
ಬುಧವಾರ ನಡೆದ ಹುಂಡಿ ಎಣಿಕೆ ವೇಳೆ 4-5 ಮಂದಿ ಭಕ್ತರು ಹಣದ ಜೊತೆಗೆ ಪತ್ರಗಳನ್ನು ಬಿಳಿಗಿರಿ ರಂಗನಾಥ ಸ್ವಾಮಿಗೆ ಅರ್ಪಣೆ ಮಾಡಿದ್ದಾರೆ. ಆಸ್ತಿ, ಧೈರ್ಯ, ಆರೋಗ್ಯ ಭಾಗ್ಯ, ಮಗನಿಗೆ ಒಳ್ಳೆಯ ಬುದ್ಧಿ ಕೊಡುವಂತೆ ತರಹೇವಾರಿ ಬೇಡಿಕೆಗಳನ್ನು ಪತ್ರದ ಮೂಲಕ ಭಕ್ತರು ಭಗವಂತನ ಮುಂದೆ ಇಟ್ಟಿದ್ದಾರೆ.
ಬಿಳಿಗಿರಿ ರಂಗನಾಥನ ಹುಂಡಿ ಎಣಿಕೆ ಕಾರ್ಯ ಭಕ್ತರ ಪತ್ರಗಳಲ್ಲಿ ಏನಿದೆ..?: ಭಕ್ತರೊಬ್ಬರು ಚೀಟಿಯೊಂದನ್ನು ಹುಂಡಿಗೆ ಹಾಕಿದ್ದು, ಆಸ್ತಿ ವ್ಯಾಜ್ಯದ ಬಗ್ಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಅಕ್ಕ ಮತ್ತು ತಂಗಿಯರಿಗೆ ಆಸ್ತಿ ಸಿಗದಿರಲಿ. ಗಂಡು ಮಕ್ಕಳ ಪರವಾಗಿ ಕೋರ್ಟ್ ತೀರ್ಪು ನೀಡಲಿ. ಯಾವುದೇ ಕಾರಣಕ್ಕೂ ಹೆಣ್ಣು ಮಕ್ಕಳಿಗೆ ಆಸ್ತಿ ಆಗಬಾರದು ಎಂದು ಪ್ರಾರ್ಥನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಭಕ್ತರಿಗೆ ಶಕ್ತಿ: 36 ದಿನಕ್ಕೆ ಮಾದಪ್ಪನ ಹುಂಡಿಯಲ್ಲಿ 2.47 ಕೋಟಿ ಸಂಗ್ರಹ
ಮತ್ತೊಂದು ಪತ್ರದಲ್ಲಿ ಯುವಕನೊಬ್ಬ ಸಮಾಜದಲ್ಲಿ ಮುಖಂಡನಾಗಿ ಗುರುತಿಸಿಕೊಳ್ಳುವ ಆಸೆಯನ್ನು ಹೊರಹಾಕಿ ಗಮನ ಸೆಳೆದಿದ್ದಾನೆ. ತನಗೆ ಮಾತನಾಡುವ ಧೈರ್ಯ ಕೊಡು. ನಮ್ಮ ಏರಿಯಾದಲ್ಲಿ ಗುರುತಿಸಿಕೊಳ್ಳುತ್ತೇನೆ. ಹಣ ಸಂಪಾದನೆ ಮಾಡುತ್ತೇನೆ. ಇಡೀ ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಲಿದ್ದು, ಏರಿಯಾದಲ್ಲಿ ಧೈರ್ಯವಾಗಿ ಮಾತನಾಡಲು ಶಕ್ತಿ ನೀಡಿ ಆಶೀರ್ವಾದಿಸು ಎಂದು ದೇವರ ಬಳಿ ತನ್ನ ಆಸೆ ಹೊರಹಾಕಿದ್ದಾನೆ.
ವಿದೇಶಿ ಭಕ್ತರಿಂದ ಕಾಣಿಕೆ ಅರ್ಪಣೆ ಮತ್ತೊಂದು ಪತ್ರದಲ್ಲಿ ತಾಯಿಯೊಬ್ಬರು ಬರೆದಿದ್ದು ಮಗನಿಗೆ ಒಳ್ಳೆಯ ಬುದ್ಧಿ ಕೊಡಲಿ, ತನ್ನನ್ನು ಬೈಯ್ಯದಿರಲಿ, ಹಿಂದೆ ಮಾಡಿದ್ದ ತಪ್ಪನ್ನು ತಾನು ಮಾಡುವುದಿಲ್ಲ. ಆರೋಗ್ಯ ಭಾಗ್ಯ ಕೊಡಲಿ ಎಂದು ಎರಡು ಪುಟಗಳ ದೀರ್ಘ ಪತ್ರ ಬರೆದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ.
ಪತ್ರದ ಮೂಲಕ ದೇವರ ಮೊರೆ ಹೋದ ಭಕ್ತರು ವಿದೇಶಿ ಭಕ್ತರಿಂದ ಕಾಣಿಕೆ: ಇನ್ನೂ ಬಿಳಿಗಿರಿ ರಂಗನಾಥನ ಹುಂಡಿ ಎಣಿಕೆಯಲ್ಲಿ 42,11,305 ಹಣ ಸಂಗ್ರಹವಾಗಿದ್ದು, ವಿದೇಶಿ ಭಕ್ತರು ದೇವರಿಗೆ ಕಾಣಿಕೆ ಅರ್ಪಿಸಿದ್ದಾರೆ. 132 ಅಮೆರಿಕನ್ ಡಾಲರ್, ನೇಪಾಳದ ಎರಡು ನೋಟುಗಳು, ಅರಬ್ ಎಮಿರೇಟ್ಸ್ನ 10 ಧೀರಂ, ಆಫ್ರಿಕನ್ ಗಾಂಬಿಯಾದ 50 ರೂ. ನ ಒಂದು ನೋಟ್ ಅನ್ನು ಭಕ್ತರು ರಂಗನಾಥನಿಗೆ ಅರ್ಪಿಸಿದ್ದಾರೆ.
ಬಿಳಿಗಿರಿ ರಂಗನ ಚಿಕ್ಕಜಾತ್ರೆ:ಕರ್ನಾಟಕದ ತಿರುಪತಿ ಎಂದೇ ಕರೆಯಲ್ಪಡುವ ಯಳಂದೂರು ತಾಲೂಕಿನ ಬಿಳಿಗಿರಿ ರಂಗನ ಬೆಟ್ಟದಲ್ಲಿ 5 ವರ್ಷದ ಬಳಿಕ ಚಿಕ್ಕಜಾತ್ರೆ ಅದ್ಧೂರಿಯಾಗಿ ಫೆಬ್ರವರಿ ತಿಂಗಳಲ್ಲಿ ನೆರವೇರಿತ್ತು. ಬೇಡಿದ ವರ ನೀಡುವ ಸೋಲಿಗರ ಆರಾಧ್ಯ ದೈವ ಬಿಳಿಗಿರಿ ರಂಗನಾಥಸ್ವಾಮಿಯ ಜಾತ್ರೆಗೆ ಭಕ್ತಸಾಗರವೇ ಹರಿದು ಬಂದಿತ್ತು. ರಥದ ಸುತ್ತ ಮೂರು ಬಾರಿ ಗರುಡ ಪ್ರದಕ್ಷಿಣೆ ಹಾಕಿದ ಬಳಿಕವೇ ಇಲ್ಲಿ ರಥೋತ್ಸವ ಆರಂಭಗೊಂಡಿತ್ತು. ಈ ಸಂದರ್ಭದಲ್ಲಿ ಭಕ್ತರು ತಾವು ಬೆಳೆದ ದವಸ- ಧಾನ್ಯಗಳನ್ನು ರಥಕ್ಕೆ ಅರ್ಪಿಸುವುದು ವಾಡಿಕೆ.
ಇದನ್ನೂ ಓದಿ:Guru Purnima: ಗುರು ಪೂರ್ಣಿಮೆ ಎಫೆಕ್ಟ್.. ನಂಜುಂಡೇಶ್ವರನ ದೇವಸ್ಥಾನದಲ್ಲಿ ಭಕ್ತ ಸಾಗರ