ಚಾಮರಾಜನಗರ: ಜಿಲ್ಲೆ ಸೇರಿದಂತೆ ಇಡೀ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದರೆ ಈ ಗ್ರಾಮದಲ್ಲಿ ಮಾತ್ರ ಕೋವಿಡ್ ಮಹಾಮಾರಿ ಸ್ಫೋಟವಾಗಿ ಜನರನ್ನು ಕಂಗೆಡಿಸಿದೆ.
ಕೊರೊನಾ ಇಳಿಕೆ ವೇಳೆ ಈ ಊರಲ್ಲಿ ಮಹಾಮಾರಿ ಅಬ್ಬರ: 36 ಕೇಸ್ ಪತ್ತೆ - 36 new covid cases found in MG Doddy village
ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ ಹನೂರು ತಾಲೂಕಿನ ಕೌದಳ್ಳಿ ಗ್ರಾ.ಪಂ ವ್ಯಾಪ್ತಿಯ ಎಂ.ಜಿ.ದೊಡ್ಡಿ ಗ್ರಾಮದಲ್ಲಿ ಒಟ್ಟು 36 ಮಂದಿಗೆ ಕೋವಿಡ್ ವೈರಸ್ ತಗುಲಿದ್ದು, ಗ್ರಾಮವನ್ನು ಸೀಲ್ಡೌನ್ ಮಾಡಿ, ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.
ಹನೂರು ತಾಲೂಕಿನ ಕೌದಳ್ಳಿ ಗ್ರಾ.ಪಂ ವ್ಯಾಪ್ತಿಯ ಎಂ.ಜಿ.ದೊಡ್ಡಿ ಎಂಬ ಗ್ರಾಮದಲ್ಲಿ ಕಳೆದ 5 ದಿನಗಳಿಂದ 6-7 ಮಂದಿಗೆ ಕೊರೊನಾ ದೃಢಪಟ್ಟಿತ್ತು. ಇದೀಗ ಒಟ್ಟು 36 ಮಂದಿಗೆ ವೈರಸ್ ತಗುಲಿದ್ದು ಹನೂರಿನ ಮೊರಾರ್ಜಿ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್ಗೆ ಸೋಂಕಿತರನ್ನು ದಾಖಲಿಸಲಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ತಮಿಳುನಾಡಿನಲ್ಲಿ ನಡೆದ ಮದುವೆಯೊಂದಕ್ಕೆ ಊರಿನ ಕೆಲವರು ತೆರಳಿದ ಪರಿಣಾಮ ವೈರಸ್ ಹಬ್ಬಿದೆ ಎನ್ನಲಾಗಿದೆ. ಜೊತೆಗೆ ಕೂಲಿ ಕೆಲಸಕ್ಕೆ ಬೇರೆ ಊರುಗಳಿಗೆ ಹೋಗಿದ್ದರಿಂದಲೂ ಸಹ ಸೋಂಕು ಹರಡಿದೆ ಎಂಬ ಮಾತುಗಳು ಕೇಳಿಬಂದಿದೆ.
ಎಂ.ಜಿ.ದೊಡ್ಡಿ ಗ್ರಾಮದಲ್ಲಿ 1,100 ರಷ್ಟು ಜನಸಂಖ್ಯೆ ಇದ್ದು, 270 ಮಂದಿಗೆ ಕೋವಿಡ್ ಟೆಸ್ಟ್ ನಡೆಸಲಾಗಿದೆ. ಗ್ರಾಮವನ್ನು ಸೀಲ್ಡೌನ್ ಮಾಡಿ, ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ. ಜೊತೆಗೆ ಸೋಂಕಿತರ ಸಂಪರ್ಕಿತರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಹಾಗೂ ಗ್ರಾಮದಲ್ಲಿ ಪ್ರತಿನಿತ್ಯ ಸ್ಯಾನಿಟೈಸಿಂಗ್ ಮಾಡಲಾಗುತ್ತಿದೆ ಎಂದು ಕೌದಳ್ಳಿ ಪಿಡಿಒ ತಿಳಿಸಿದ್ದಾರೆ.